ADVERTISEMENT

ಆನೇಕಲ್: ಅಧಿಕಾರಿಗಳ ವಿರುದ್ಧ ನ್ಯಾಯಾಧೀಶರ ಅಸಮಾಧಾನ

ಆನೇಕಲ್: ವಿಶ್ವ ಸಾಮಾಜಿಕ ನ್ಯಾಯ ದಿನಕ್ಕೆ ಅಧಿಕಾರಿಗಳು ಗೈರು, ಸಿದ್ಧತೆಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 7:40 IST
Last Updated 22 ಫೆಬ್ರುವರಿ 2026, 7:40 IST
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆನೇಕಲ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣರಾಜ್ ಉದ್ಘಾಟಿಸಿದರು
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆನೇಕಲ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣರಾಜ್ ಉದ್ಘಾಟಿಸಿದರು   

ಆನೇಕಲ್: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಗೆ ಅಧಿಕಾರಿಗಳು ಗೈರು ಹಾಗೂ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಇರುವುದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಆನೇಕಲ್‌ ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಆನೇಕಲ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣರಾಜ್‌ ಅವರು ಅಸಮಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮ ನಿರೂಪನೆ, ಉದ್ಘಾಟನೆ ಸೇರಿದಂತೆ ವಿವಿಧ ಸಿದ್ಧತೆಗಳಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಿಟ್ಟಾದರು.

ADVERTISEMENT

ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ನೆರವು ಅರಿವು ಕಾರ್ಯಕ್ರಮಗಳ ಬಗ್ಗೆ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಶೋಚನೀಯ. ಸಾರ್ವಜನಿಕರಿಗೆ ಕಾನೂನಿನ ನೆರವು ನೀಡಬೇಕೆಂದು ಕಾರ್ಯಕ್ರಮ ರೂಪಿಸಲಾಗಿದೆ. ಆದರೆ ಅತಿಥಿಗಳು, ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಕಾರ್ಯಕ್ರಮವ ಮುಖ್ಯ ಉದ್ದೇಶದ ದಾರಿ ತಪ್ಪಿಸಿದ್ದಾರೆ. ಪೂರ್ವಭಾವಿ ಸಭೆ ಕೈಗೊಂಡ ನಿರ್ಧಾರಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಅತೃಪ್ತಿ ಹೊರಹಾಕಿದರು.

ಸಮ ಸಮಾಜ ನಿರ್ಮಾಣ ಗುರಿ

ಸಮ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಲು ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು, ಮಹಿಳೆಯರು, ಶೋಷಿತ ವರ್ಗಗಳ ಹಕ್ಕು ಮತ್ತು ನ್ಯಾಯವನ್ನು ರಕ್ಷಿಸಬೇಕು ಎಂಬುದು ಕಾರ್ಯಕ್ರಮದ ಗುರಿಯಾಗಿದೆ. ಸಮಾಜದಲ್ಲಿ ಅರಿವು ಮತ್ತು ಜ್ಞಾನ ಇಲ್ಲದಿದ್ದರೆ ಹೆಚ್ಚು ಮೋಸವಾಗುತ್ತದೆ. ಹಾಗಾಗಿ ಮೋಸದಿಂದ ತಪ್ಪಿಸಿಕೊಳ್ಳಲು ಕಾನೂನಿನ ಜ್ಞಾನ ಅವಶ್ಯಕವಾಗಿದೆ. ದಿನನಿತ್ಯದ ಜೀವನದಲ್ಲಿ ಕಾನೂನು ಅತ್ಯಂತ ಮುಖ್ಯವಾಗಿದೆ. ಹಾಗಾಗಿ ಕಾನೂನುಗಳ ಬಗ್ಗೆ ಹೆಚ್ಚು ಜ್ಞಾನ ಪಡೆಯಬೇಕು ಎಂದರು.

ಭಾರತದಲ್ಲಿ ಹಲವಾರು ಜಾತಿ ಧರ್ಮಗಳಿದ್ದರೂ ನಮ್ಮೆಲ್ಲರಿಗೂ ಸಂವಿಧಾನವೇ ಧರ್ಮ ಗ್ರಂಥವಾಗಿದೆ. ಹಾಗಾಗಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ತಲುಪಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸರ್ಕಾರಿ ಅಭಿಯೋಜಕ ವಿನೋಧ್‌ ಕುಮಾರ್‌ ಹೇಳಿದರು.

ವಕೀಲರ ಸಂಘದ ಖಜಾಂಚಿ ಶಾರದಮಣಿ, ವಕೀಲರಾದ ಎಂ.ಎ.ಶಿವರಾಜು, ಶ್ರೀಕಂಠಾಚಾರ, ನೇತ್ರಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.