
ಅನುಗೊಂಡಹಳ್ಳಿ (ಹೊಸಕೋಟೆ): ಅಂಗನವಾಡಿ ಅಡುಗೆ ಸಹಾಯಕರಲ್ಲಿರುವ ಪಾಕ ಕಲೆ ಪ್ರದರ್ಶಿಸುವ ಹಾಗೂ ಮಕ್ಕಳಿಗೆ ಗುಣಮಟ್ಟ ಆಹಾರ ನೀಡಲು ಸಮೇತನಹಳ್ಳಿ ಕ್ಲಸ್ಟರ್ ಮಟ್ಟದಲ್ಲಿ ಅಂಗನವಾಡಿ ಅಡುಗೆ ಸಹಾಯಕರಿಂದ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ಅನುಗೊಂಡಹಳ್ಳಿ ಹೋಬಳಿಯ ಸಮೇತನಹಳ್ಳಿ ಕ್ಲಸ್ಟರ್ ಮಟ್ಟದ ಕೊರಳೂರು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಡುಗೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೇಡ. ಸಂವಿಧಾನ ಶಿಲ್ಪಿ ಅಂಬೇಡ್ಕರ್, ಸರ್ ಎಂ. ವಿಶ್ವೇಶ್ವರಯ್ಯ, ಕುವೆಂಪು, ಬೇಂದ್ರೆ ಸೇರಿದಂತೆ ಇನ್ನಿತರ ಮಹಾನ್ ನಾಯಕರು ಸರ್ಕಾರಿ ಶಾಲೆಯಲ್ಲೇ ಓದಿದವರಾಗಿದ್ದಾರೆ ಎಂದರು.
ಕೊಳರೂರು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಹಾಗು ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎ.ಎನ್. ತೇಜೋರಾಮ್ ಮಾತನಾಡಿ, ಅಂಗನವಾಡಿ ಅಡುಗೆ ಸಹಾಯಕರನ್ನು ಉತ್ತೇಜಿಸುವ ಹಾಗೂ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಸಲುವಾಗಿ ನಮ್ಮ ಶಾಲೆಯಲ್ಲಿ ಅಂಗನವಾಡಿ ಅಡುಗೆ ಸಹಾಯಕರಿಂದ ಬೋಜನ ಸಿದ್ಧಪಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಯಿತು ಎಂದರು.
ವೈವಿಧ್ಯಮಯ ತಿನಿಸುಗಳನ್ನು ಸಿದ್ಧಪಡಿಸಿದ ಕೊರಳೂರು ಶಾಲೆ ಅಡುಗೆ ಸಹಾಯಕರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಶಂಕರೇಗೌಡ, ಶ್ರೀನಾಥ್, ಶಂಕರ್. ಮಂಜುನಾಥ್, ಶಾಲಿನಿ, ಶ್ರೀನಿವಾಸ್ ಸುರೇಶ್, ಮುನಿಶಾಮಪ್ಪ, ದೇವರಾಜು, ಜಿ.ನಾಗರಾಜು, ಶಿಕ್ಷಕರು, ಶಿಕ್ಷಕಿಯರು, ಮಕ್ಕಳು, ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.