
ದೊಡ್ಡಬಳ್ಳಾಪುರ: ವಾರ್ಷಿಕವಾಗಿ ₹5 ರಿಂದ ₹6 ಕೋಟಿ ಆದಾಯಗಳಿಸುತ್ತಿದ್ದ, ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದ, ರೈತರ ಆಕಸ್ಮಿಕ ಮರಣಕ್ಕೆ ಪರಿಹಾರ ನೀಡುತ್ತಿದ್ದ, ರೈತರ ಹೊಲಗಳಿಗೆ ಡಾಂಬರು ರಸ್ತೆ ಹಾಕಿಸುತ್ತಿದ್ದ ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಇಂದು ಮಾರುಕಟ್ಟೆ ಆವರಣದಲ್ಲಿ ಕಸ ಗುಡಿಸಲು ಸಹ ಕಸಿಲ್ಲದೆ ಇಡೀ ಮಾರುಕಟ್ಟೆ ಪ್ರದೇಶ ಗಬ್ಬು ನಾರುತ್ತಿದೆ!!.
2020ರಲ್ಲಿ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಎಪಿಎಂಸಿ ಆದಾಯಗಳಿಕೆ ಇಳಿಕೆಯಾಗಿದೆ. ಅಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಮಾರುಕಟ್ಟೆಗೆ ಬರುತ್ತಿದ್ದ ರೈತರು ಹಾಗೂ ವರ್ತಕರಿಗೆ ಮೂಲ ಸೌಕರ್ಯ ಕಲ್ಪಿಸುವುದರಿಂದಲೂ ವಿಮುಖವಾಗಿದೆ.
ಎಪಿಎಂಸಿ ಆವರಣದಲ್ಲಿ ಸ್ವಚ್ಛತೆಯ ನಿರ್ವಹಣೆಗಾಗಿಯೇ ವಾರ್ಷಿಕ ₹1.80 ಲಕ್ಷ ಗುತ್ತಿಗೆ ನೀಡಲಾಗುತಿತ್ತು. ಆದರೆ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ಚುನಾಯಿತ ಜನಪ್ರತಿನಿಧಿಗಳು ಇಲ್ಲದಾಗಿದ್ದಾರೆ. ಅಧಿಕಾರಿಗಳ ಸಂಖ್ಯೆಯನ್ನು ಕಡಿತಮಾಡಲಾಗಿದೆ.
ಇಲ್ಲಿನ ಕೆಲವು ವಾಣಿಜ್ಯ ಮಳಿಗೆಗಳಿಂದ ಬರುವ ಬಾಡಿಗೆ ಹಣ ಸರ್ಕಾರದ ಖಜಾನೆಗೆ ನೇರವಾಗಿ ಜಮೆಯಾಗುತ್ತದೆ. ಹೀಗಾಗಿ ಸಮಿತಿಗೆ ಯಾವುದೇ ಆದಾಯ ಮೂಲ ಇಲ್ಲದಾಗಿದೆ. ವಿದ್ಯುತ್ ಬಿಲ್ ಪಾವತಿಗೂ ಸರ್ಕಾರದಿಂದ ಹಣ ಮಂಜೂರು ಮಾಡಬೇಕಿದೆ ಎನ್ನುತ್ತಾರೆ ಜೋಳದ ವ್ಯಾಪಾರಿ ನಂಜುಂಡೇಶ್ವರ.
ಎಪಿಎಂಸಿ ಆವರಣದಲ್ಲಿ ಎರಡು ಶೌಚಾಲಯಗಳಿದ್ದರೂ ಇವುಗಳ ನಿರ್ವಹಣೆ, ನೀರಿನ ಸೌಲಭ್ಯ ಇಲ್ಲದೆ ದುರ್ನಾತ ಬೀರುತ್ತಿವೆ. ಹೀಗಾಗಿ ಇವುಗಳ ಒಳಗೆ ಹೋಗುವವರಿಗಿಂತಲೂ ಹೊರಗೆ ಶೌಚಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚು. ಇನ್ನೂ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಮುರಿದು ಬಿದ್ದ ಸಾಮಾನುಗಳನ್ನು ತುಂಬುವ ಗೋದಾಮಾಗಿ ಬಳಕೆಯಾಗುತ್ತಿದೆ.
ಸಹಜವಾಗಿಯೇ ತರಕಾರಿ ಮಾರುಕಟ್ಟೆಯಲ್ಲಿ ಲೋಡುಗಟ್ಟಲೇ ಹಸಿ ಕಸ ಉತ್ಪತ್ತಿಯಾಗುತ್ತದೆ. ಆದರೆ ಕಸ ಹೊರಗೆ ಸಾಗಿಸಲು ಸಮಿತಿಯ ಬಳಿ ಹಣ ಇಲ್ಲದೆ ಪ್ರತಿ ವಾಣಿಜ್ಯ ಮಳಿಗೆಗಳಿಂದ ₹250 ರಿಂದ ₹150 ವಸೂಲಿ ಮಾಡಲಾಗುತ್ತಿದೆ. ಇದು ಸಹ ಸರಿಯಾಗಿ ವಸೂಲಿಯಾಗದೆ ಕಸ ಗುಡಿಸುವವರಿಗೆ ಹಣ ನೀಡುವುದು ವಿಳಂಬವಾಗುತ್ತಿದೆ. ಈ ಹಣದಲ್ಲಿ ಭದ್ರತಾ ಸಿಬ್ಬಂದಿಯ ಸಂಬಳ, ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಖರ್ಚು ನಿಭಾಯಿಸಬೇಕಾದ ಸ್ಥಿತಿ ಇಲ್ಲಿನ ಅಧಿಕಾರಿಗಳದ್ದು.
ಸಿಬ್ಬಂದಿ ಕೊರತೆಯಿಂದಾಗಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಎಪಿಎಂಸಿ ಆವರಣದಲ್ಲೇ ಒಂದೆಡೆ ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು, ವರ್ತಕರು ಕಸದ ರಾಶಿಯಿಂದ ಬರುವ ಹೊಗೆಯನ್ನು ಸೇವಿಸುತ್ತ ಅನಾರೋಗ್ಯ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ನಗರ ಹಾಗೂ ಗ್ರಾಮಾಂತರ ಎರಡೂ ಪೊಲೀಸ್ ಠಾಣೆಗಳಿಗೂ ಕೂಗಳತೆ ದೂರದಲ್ಲೇ ಎಪಿಎಂಸಿ ಆವರಣ ಇದ್ದರು ಸಹ ರಾತ್ರಿ ವೇಳೆ ಇಲ್ಲಿನ ವಿಶಾಲವಾದ ರಸ್ತೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಪಾನಗೋಷ್ಠಿ ಅಬ್ಬರ ಜೋರಾಗಿ ನಡೆಯುತ್ತದೆ. ಭದ್ರತಾ ಸಿಬ್ಬಂದಿಯ ಕೊರತೆಯಿಂದಾಗಿ ರಾತ್ರಿ ವೇಳೆ ಮದ್ಯದ ಪಾರ್ಟಿಗಳಿಗೆ ಕಡಿವಾಣ ಇಲ್ಲದಾಗಿದೆ. ಮದ್ಯದ ಪಾರ್ಟಿ ನಂತರ ರಸ್ತೆಗಳಿಗೆ ಬಿಸಾಡುವ ಖಾಲಿ ಬಾಟಲಿಗಳ ಚೂರುಗಳನ್ನು ಪಾದಾಚಾರಿಗಳು ಚುಚ್ಚಿಸಿಕೊಳ್ಳುವಂತಾಗಿದೆ.
ಜನ ಏನು ಹೇಳುತ್ತಾರೆ ?
ನಗರದಲ್ಲಿನ ಎಪಿಎಂಸಿ ಆವರಣದಲ್ಲಿ ದಿನಸಿ ಅಂಡಿಗಳು ಹೂ ಹಣ್ಣು ತರಕಾರಿ ಸೇರಿದಂತೆ 150ಕ್ಕೂ ಹೆಚ್ಚು ವಿವಿಧ ವಾಣಿಜ್ಯ ಮಳಿಗೆಗಳು ಇವೆ. ಪ್ರತಿ ದಿನ ಇಲ್ಲಿ ಬೆಳಗಿನ ಜಾವ ನಡೆಯುವ ಹೂ ತರಕಾರಿಗಳ ಹರಾಜಿನಲ್ಲಿ ಭಾಗವಹಿಸಲು ನೂರಾರು ಜನ ರೈತರು ವರ್ತಕರು ಬರುತ್ತಾರೆ. ಆದರೆ ಕುಡಿಯುವ ನೀರು ಶೌಚಾಲಯ ಸೇರಿದಂತೆ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲದಾಗಿವೆ – ಸಿ.ಎಚ್.ರಾಮಕೃಷ್ಣ ರೈತ ವರ್ತಕರ
ಎರಡು ದಶಕಗಳ ಹಿಂದೆ ಎಪಿಎಂಸಿ ಪ್ರಾರಂಭವಾದಾಗ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ಇಂದಿಗೂ ಕಸ ತೆಗೆದುಹಾಕಿಲ್ಲ. ಮಳೆ ಬಂದಾಗ ಚರಂಡಿಯಲ್ಲಿ ಹರಿಯಬೇಕಿರುವ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿವೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಹಣದ ಕೊರತೆಯಿಂದಾಗಿ ನಮ್ಮ ಮನವಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲದಾಗಿದೆ – ಸೋಮನಾಥ್ ಎಪಿಎಂಸಿ ಮಾಜಿ ನಿರ್ದೇಶಕ ಅಕ್ಕಿ ವ್ಯಾಪಾರಿ
ಎಪಿಎಂಸಿ ಮಾರುಕಟ್ಟೆ ಈಗ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ದಿನದ 24 ಗಂಟೆಗಳ ಕಾಲವು ರೈತರು ವರ್ತಕರು ಕೂಲಿ ಕಾರ್ಮಿಕರು ಸೇರಿದಂತೆ ನೂರಾರು ಜನ ಇದ್ದೇ ಇರುತ್ತಾರೆ. ಇವರಿಗೆ ಕನಿಷ್ಠ ಶುದ್ಧ ಕುಡಿಯುವ ನೀರು ಸಹ ಇಲ್ಲವೆಂದಾರೆ ಎಪಿಎಂಸಿ ಅಧಿಕಾರಿಗಳು ವ್ಯಾಪಾರಿಗಳಿಂದ ಬಾಡಿಗೆ ಸೆಸ್ ತೆರಿಗೆ ವಸೂಲಿ ಏಕೆ ಮಾಡಬೇಕಿದೆ– ಮೋಹನ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.