ADVERTISEMENT

ಬಕ್ರೀದ್: ಕುರಿ, ಮೇಕೆ ಬೆಲೆ ಏರಿಕೆ

ರೈತರ ಮುಖದಲ್ಲಿ ಮಂದಹಾಸ

ಪ್ರಜಾವಾಣಿ ವಿಶೇಷ
Published 28 ಜೂನ್ 2023, 4:18 IST
Last Updated 28 ಜೂನ್ 2023, 4:18 IST
ವಿಜಯಪುರ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಬಂದಿದ್ದ ಕುರಿಗಳು
ವಿಜಯಪುರ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಬಂದಿದ್ದ ಕುರಿಗಳು   

ಎಂ.ಮುನಿನಾರಾಯಣ.

ವಿಜಯಪುರ(ದೇವನಹಳ್ಳಿ): ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ ಹಾಗೂ ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಯಾಗಿರುವುದು ರೈತರಿಗೆ ವರದಾನವಾಗಿದೆ.

ಗ್ರಾಮೀಣ ಭಾಗದಲ್ಲಿನ ಬಹುತೇಕ ರೈತರು ಕೃಷಿ ಮತ್ತು ತೋಟಗಾರಿಕೆ ಜೊತೆಯಲ್ಲಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯ. ಬಡ ರೈತರ ಪಾಲಿಗೆ ಕುರಿ ಮತ್ತು ಮೇಕೆ ಸಾಕಾಣೆ ಆರ್ಥಿಕತೆಯ ಮೂಲಗಳಾಗಿವೆ.

ADVERTISEMENT

ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದಾಗ, ತೋಟಗಳಲ್ಲಿ ಬೆಳೆ ಬಿತ್ತನೆ ಮಾಡುವ ಸಮಯದಲ್ಲಿ, ಮದುವೆಗಳ ಸಮಯದಲ್ಲಿ ಹಣದ ಕೊರತೆ ಎದುರಾದಾಗ ತಾವು ಸಾಕಾಣಿಕೆ ಮಾಡಿರುವ ಕುರಿ, ಮೇಕೆ ಮಾರಾಟ ಮಾಡಿ ತಮ್ಮ ಆರ್ಥಿಕ ಕೊರತೆಗಳನ್ನು ನೀಗಿಸಿಕೊಳ್ಳುತ್ತಾರೆ.

ಜೂನ್‌ 29 ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ, ಮೇಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಬೆಲೆ ಗಗನಕ್ಕೇರಿದೆ. 20 ಕೆ.ಜಿ. ತೂಕದ ಒಂದು ಕುರಿಯ ಬೆಲೆ ₹25 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕೆಲವು ಕುರಿಗಳು ₹ 35 ಸಾವಿರದವರೆಗೂ  ಮಾರಾಟವಾಗುತ್ತಿವೆ. ಸ್ಥಳೀಯ ಮುಸ್ಲಿಂ ಸಮುದಾಯದವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತರಿಗೆ ಒಂದು ತಿಂಗಳ ಮೊದಲೇ ಮುಂಗಡ ಹಣ ನೀಡಿ, ಕುರಿಗಳನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನ ಕಡೆಗೆ ಹೋಗಿ ಖರೀದಿ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ, ಚಳ್ಳಕೆರೆ, ಬನ್ನೂರು ಮುಂತಾದ ಕಡೆಗಳಿಂದ ರೈತರು ತಾವು ಸಾಕಾಣಿ ಮಾಡಿರುವ ಕುರಿಗಳನ್ನು ಟೆಂಪೋಗಳಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷದ ಬಕ್ರೀದ್ ಹಬ್ಬದಂದು 20 ಕೆ.ಜಿ. ಕುರಿಯ ಬೆಲೆ ₹15 ಸಾವಿರದವರೆಗೂ ಇತ್ತು. ಆದರೆ, ಈ ಬಾರಿ ದುಪ್ಪಟ್ಟಾಗಿದೆ. ಮೇಕೆಗಳು ಕೂಡಾ ₹30 ಸಾವಿರಕ್ಕೆ ಮಾರಾಟವಾಗುತ್ತಿದೆ. ಬಡವರು, ಮಧ್ಯಮ ವರ್ಗದವರು, ಖರೀದಿ ಮಾಡಲು ಹರಸಾಹಸ ಪಡುವಂತಾಗಿದೆ ಎಂದು ಗ್ರಾಹಕ ಬಾಬಾಜಾನ್ ಅಭಿಪ್ರಾಯಪಟ್ಟರು.

ಮಾರಾಟಕ್ಕೆ ಬಂದಿದ್ದ ಕುರಿ ಮೇಕೆಗಳು

- ಬಕ್ರೀದ್ ಹಬ್ಬಕ್ಕೆಂದು ಸಾಕಾಣಿಕೆ

ಬಕ್ರೀದ್ ಹಬ್ಬದ ಸಮಯದಲ್ಲಿ ಕುರಿ ಮೇಕೆಗಳಿಗೆ ಉತ್ತಮ ಬೇಡಿಕೆ ಬರುವ ಕಾರಣ ನಾವು ವರ್ಷವಿಡೀ ಕುರಿ ಮೇಕೆಗಳನ್ನು ಪೌಷ್ಟಿಕ ಆಹಾರ ನೀಡಿ ಸಾಕಾಣೆ ಮಾಡಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಸಮಯದಲ್ಲಿ ಆರೋಗ್ಯವಂತ ಕುರಿಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬುದು ರೈತ ಕೇಶವ ರೆಡ್ಡಿ ಅವರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.