
ದೊಡ್ಡಬಳ್ಳಾಪುರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಲ್ಲೆ, ನರಮೇಧ ಖಂಡಿಸಿ ಹಾಗೂ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು.
ನಗರದ ರುಮಾಲೆ ವೃತ್ತದಿಂದ ಬಸ್ ನಿಲ್ದಾಣದ ವೃತ್ತದವರೆಗೆ ಪಂಜು ಹಿಡಿದು ತೆರಳಿದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಬಾಂಗ್ಲಾದೇಶದ ವಿರುದ್ಧ ಘೋಷಣೆ ಕೂಗಿ ಬಾಂಗ್ಲಾದ ಮೈಮೆನ್ಸಿಂಗ್‌ನಲ್ಲಿ ಹತ್ಯೆಯಾದ ದೀಪು ಚಂದ್ರದಾಸ್ ಶ್ರದ್ಧಾಂಜಲಿ ಸಲ್ಲಿಸಿದರು.
ಬಾಂಗ್ಲಾದಲ್ಲಿನ ಕ್ರೂರತ್ವ ಹಾಗೂ ಹಿಂಸೆ ಇಡೀ ಮನುಕುಲಕ್ಕೆ ಅಪಾಯಕಾರಿ. ಈ ರೀತಿ ಜನರು ದಂಗೆಯೆದ್ದು ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಹಿಂಸಾಕೃತ್ಯ ವಿಷಯಗಳಿಗೆ ಇಳಿದಿರುವುದರಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡ ಎದ್ದು ಕಾಣುತ್ತಿದೆ. ರಾಜರೋಷವಾಗಿ ಒಬ್ಬ ಹಿಂದೂವನ್ನು ಮರಕ್ಕೆ ನೇತು ಹಾಕಿ ಬೆಂಕಿ ಹಚ್ಚುವ ಮೂಲಕ ಹಿಂಸೆಗೆ ಒಳಪಟ್ಟಿದ್ದನ್ನು ಗಮನಿಸಿದರೆ ಅಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ ಎಂದು ಬಜರಂಗದಳ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಕೃತ್ಯಗಳ ವಿರುದ್ಧ ಇಡೀ ಹಿಂದೂ ಸಮಾಜ ಒಂದಾಗಬೇಕಾಗಿದೆ. ಯಾವುದೋ ನೆಪದಿಂದ ಹಿಂದೂಗಳ ವಿರುದ್ಧ ಹಿಂಸೆಗೆ ಇಳಿದ ಅಲ್ಲಿನ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇವರನ್ನು ಕ್ಷಮಿಸಕೂಡದು. ಈ ವಿಚಾರದಲ್ಲಿ ದೇಶದ ಪ್ರಧಾನಿ ಮಧ್ಯ ಪ್ರವೇಶಿಸಿ ಹಿಂದೂಗಳ ಮೇಲಿನ ದೌರ್ಜ್ಯನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಂತಿ, ಸೌಹಾರ್ದತೆ ನೆಲೆಸಲು ವಿಶ್ವಸಂಸ್ಥೆಗೆ ಪತ್ರ ಬರೆಯಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ, ದೌರ್ಜನ್ಯ ಖಂಡನೀಯ. ಹಿಂದೂ ಸಮಾಜ ಜಾಗೃತರಾಗಿ ಸಂಘಟಿತರಾಗಬೇಕೆಂದು ಜಿಲ್ಲಾ ಕಾರ್ಯದರ್ಶಿ ರವಿ ಹೇಳಿದರು.
ಬಾಂಗ್ಲಾ ಮತ್ತು ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಮತಾಂತರ, ಬಲವಂತದ ಮದುವೆ, ಹಲ್ಲೆ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಸಂಬಂಧಿಸಿದ ದೇಶಗಳ ಮುಖ್ಯಸ್ಥರ ಜತೆ ಚರ್ಚಿಸಿ ದೌರ್ಜನ್ಯ ತಡೆಗಟ್ಟಬೇಕೆಂದು ಕೋಲಾರ ವಿಭಾಗ ಬಜರಂಗದಳ ಸಂಯೋಜಕ ನರೇಶ್ ಒತ್ತಾಯಿಸಿದರು.
ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಾಂಗ್ಲಾದೇಶ ಮುಸ್ಲಿಮರು ಬಂದು ಅಕ್ರಮವಾಗಿ ನೆಲೆಸಿದ್ದಾರೆ. ಇವರನ್ನು ಜಿಲ್ಲಾ ಅಡಳಿತ ಮತ್ತು ಪೊಲೀಸ್ ಇಲಾಖೆ ಗುರುತಿಸಿ, ಅವರ ದೇಶಕ್ಕೆ ಕಳಿಸಬೇಕು ಎಂದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಪದಾಧಿಕಾರಿಗಳಾದ ಶ್ರೀಕಾಂತ್, ರಮೇಶ್, ಅಗ್ನಿ ವೆಂಕಟೇಶ, ಉಮೇಶ್, ಪುನೀತ್, ಮಧು, ಸೋಮು, ಕಿರಣ್, ಬಲರಾಮ್,ಮುನಿಕೃಷ್ಣ, ಮಹೇಶ್ ಬಾಬು, ರಾಹುಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.