ADVERTISEMENT

ರಾಸು, ಪಕ್ಷಿಗಳಿಗೆ ಆಲದಮರ ಆಶ್ರಯ

ವಿಜಯಪುರ ಬಳಿಯ ಚಿಕ್ಕನಹಳ್ಳಿ ತಂಗುದಾಣದ ಬಳಿಯ ವೃಕ್ಷ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 13:51 IST
Last Updated 29 ಏಪ್ರಿಲ್ 2019, 13:51 IST
ವಿಜಯಪುರ ಹೋಬಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಆಲದ ಮರದ ಕೆಳಗೆ ರಾಸು ಕಟ್ಟಿರುವುದು 
ವಿಜಯಪುರ ಹೋಬಳಿ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಆಲದ ಮರದ ಕೆಳಗೆ ರಾಸು ಕಟ್ಟಿರುವುದು    

ವಿಜಯಪುರ: ಇಲ್ಲಿಗೆ ಸಮೀಪದ ಚಿಕ್ಕನಹಳ್ಳಿ ಗ್ರಾಮದ ತಂಗುದಾಣದ ಬಳಿಯಿರುವ ಆಲದಮರ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿ ನಿಂತಿದೆ.

ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ ಎನ್ನುವ ಘೋಷಣೆಗಳು ಆಗಾಗ ಮೊಳಗುತ್ತಲೇ ಇರುತ್ತವೆ. ಪರಿಸರವಾದಿಗಳೂ ಇದೇ ವಾದವನ್ನು ಪದೇ ಪದೇ ಮಂಡನೆ ಮಾಡುತ್ತಿರುತ್ತಾರೆ. ಆದರೆ ನಗರೀಕರಣದ ಹೆಸರಿನಲ್ಲಿ ಮರಗಳನ್ನು ಕಡಿದು ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಹೆಚ್ಚಾಗಿದೆ. ಈ ನಡುವೆ ಬೃಹತ್ ಗಾತ್ರದ ಈ ಆಲದ ಮರ ತನ್ನ ಕೊಂಬೆಗಳ ಮೂಲಕ ಬಿಟ್ಟಿರುವ ಬೇರುಗಳ ಸಹಾಯದಿಂದ ವಿಶಾಲವಾಗಿ ಹರಡಿಕೊಂಡಿದೆ. ಊರಿನಲ್ಲಿರುವ ರಾಸುಗಳನ್ನು ರೈತರು ಬೆಳಗಿನ ವೇಳೆ ಈ ಮರದ ಕೆಳಗೆ ಕಟ್ಟಿ ಮೇವು ಕೊಟ್ಟು ಹೋಗುತ್ತಾರೆ.

ಮಧ್ಯಾಹ್ನ ನೀರು ಕುಡಿಸುತ್ತಾರೆ. ಹಾಲು ಕರೆಯುವ ಸಮಯಕ್ಕೆ ಸರಿಯಾಗಿ ರಾಸುಗಳನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿಯವರೆಗೂ ಎಷ್ಟೇ ಬಿಸಿಲಿದ್ದರೂ ರಾಸುಗಳು, ಪಕ್ಷಿಗಳು ಈ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತವೆ. ಮರದಲ್ಲಿನ ಎಲೆಗಳು, ರಾಸುಗಳು ಮೇಕೆಗಳಿಗೆ ಆಹಾರವಾಗುವುದಲ್ಲದೆ, ಇದರಲ್ಲಿ ಬಿಡುವ ಕಾಯಿಗಳು ಪಕ್ಷಿಗಳಿಗೆ ಆಹಾರವಾಗುತ್ತಿವೆ.

ADVERTISEMENT

ಆಲದ ಮರದಲ್ಲಿನ ಕೊಂಬೆಗಳಿಂದ ಭೂಮಿಯ ಮಟ್ಟಕ್ಕೆ ಇಳಿದಿರುವ ಬೇರುಗಳು ವಿವಿಧ ಬಗೆಯ ಕಲಾಕೃತಿಗಳ ಆಕಾರದಲ್ಲಿ ಬೆಳೆದಿರುವುದು ನೋಡಲು ಆಕರ್ಷಣೀಯವಾಗಿವೆ ಎಂದು ಗ್ರಾಮಸ್ಥ ಪಿಳ್ಳಪ್ಪ ಹೇಳುತ್ತಾರೆ.

ಮುಖಂಡ ಕದಿರಪ್ಪ ಮಾತನಾಡಿ, ‘ನಾವು ಚಿಕ್ಕವರಿದ್ದಾಗ ಊರಿನ ಸುತ್ತಲಿನಲ್ಲಿ ಸಾಕಷ್ಟು ಮರಗಳಿದ್ದವು. ಮನೆಗಳು ಇದ್ದದ್ದು ಅಪರೂಪ. ಈಗ ಮನೆಗಳು ಜಾಸ್ತಿಯಾಗಿವೆ. ಮರಗಳು ಇಲ್ಲವಾಗಿವೆ’ ಎನ್ನುತ್ತಾರೆ.

‘ನಾವು ಚಿಕ್ಕ ಹುಡುಗರಾಗಿದ್ದಾನಿಂದ ಈ ಮರವಿದೆ. ಸುತ್ತಲಿನ ಹಳ್ಳಿಗಳಿಂದ ನಡೆದುಕೊಂಡು ವಿಜಯಪುರಕ್ಕೆ ಹೋಗುತ್ತಿದ್ದ ಜನರು ಈ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ಹೋಗುತ್ತಿದ್ದರು. ಪಕ್ಕದಲ್ಲೆ ಒಂದು ಮಂಟಪವಿತ್ತು. ಅಲ್ಲಿ ಮದುವೆ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ವರನನ್ನು ಮದುವೆಗೆ ಸಿದ್ಧಗೊಳಿಸಬೇಕಾದರೆ ಈ ಮರದ ಕೆಳಗೆ ಕರೆದುಕೊಂಡು ಬಂದು ಸಿಂಗಾರ ಮಾಡಿ ಮಂಟಪಕ್ಕೆ ಕರೆದುಕೊಂಡು ಹೋಗುವ ವಾಡಿಕೆಯಿತ್ತು’ ಎನ್ನುತ್ತಾರೆ.

ಈಗ ಕಲ್ಯಾಣಮಂಟಪಗಳು, ದೇವಾಲಯಗಳು ತಲೆ ಎತ್ತಿದ ನಂತರ ಇಂತಹ ಮರಗಳ ಕೆಳಗೆ ವರನನ್ನು ಸಿದ್ಧಗೊಳಿಸುವ ಪದ್ಧತಿ ಕಂಡು ಬರುತ್ತಿಲ್ಲ. ಆದರೂ ನಮ್ಮೂರಿನ ಹಸುಗಳು, ಎಮ್ಮೆಗಳು, ಮೇಕೆಗಳಿಗೆ ಆಶ್ರಯವಾಗಿದೆ. ರಾತ್ರಿ ವೇಳೆ ಸಾವಿರಾರು ಪಕ್ಷಿಗಳು ಈ ಮರದಲ್ಲಿ ವಾಸ ಮಾಡುತ್ತವೆ. ಇಂತಹ ಮರಗಳನ್ನು ಬೆಳೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.