ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನ: ತಬ್ಬಲಿ ಮರಿಗಳ ತಾಯಿ ಸಾವಿತ್ರಮ್ಮ

ನೂರಕ್ಕೂ ಹೆಚ್ಚು ಅನಾಥ ಮರಿಗಳಿಗೆ ಮಡಿಲು

​ಪ್ರಜಾವಾಣಿ ವಾರ್ತೆ
Published 19 ಮೇ 2023, 20:14 IST
Last Updated 19 ಮೇ 2023, 20:14 IST
ಸಾವಿತ್ರಮ್ಮ ಅವರನ್ನು ಕಂಡೊಡನೆ ಓಡಿ ಬಂದು ಮುತ್ತಿಕೊಂಡ ಅನಾಥ ಚಿರತೆ ಮರಿಗಳು
ಸಾವಿತ್ರಮ್ಮ ಅವರನ್ನು ಕಂಡೊಡನೆ ಓಡಿ ಬಂದು ಮುತ್ತಿಕೊಂಡ ಅನಾಥ ಚಿರತೆ ಮರಿಗಳು   

ಆನೇಕಲ್: ತಾಯಿಯಿಂದ ದೂರಾವಾದ ಮತ್ತು ತಬ್ಬಲಿಯಾದ ಹುಲಿ, ಚಿರತೆ, ಕರಡಿ ಮರಿಗಳು ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕಿ ಸಾವಿತ್ರಮ್ಮ ತಾಯಿಯಾಗಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈವರೆಗೂ ನೂರಾರು ಅನಾಥ ಮರಿಗಳನ್ನು ಸ್ವಂತ ಮಕ್ಕಳಂತೆ ಅಕ್ಕರೆಯಿಂದ ಆರೈಕೆ ಮಾಡಿ ಜೋಪಾನ ಮಾಡಿದ್ದಾರೆ.

ಬನ್ನೇರುಘಟ್ಟ ಸಮೀಪದ ಶೀಲೀಂದ್ರ
ದೊಡ್ಡಿಯ ಸಾವಿತ್ರಮ್ಮ 20 ವರ್ಷಗಳಿಂದ ಬನ್ನೇರು ಘಟ್ಟ ಜೈವಿಕ ಉದ್ಯಾನದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಡಿನಲ್ಲಿ ಆಕಸ್ಮಿಕವಾಗಿ ತಾಯಿಯಿಂದ ದೂರವಾದ ಅಥವಾ ತಬ್ಬಲಿಯಾದ  ಹುಲಿ, ಕರಡಿ, ಸಿಂಹ, ಚಿರತೆ, ಜಿಂಕೆ ಮರಿಗಳನ್ನು ಉದ್ಯಾನದ ಆಸ್ಪತ್ರೆಗೆ ತರಲಾಗುತ್ತಿದೆ. ಕಾಡಿನ ತಬ್ಬಲಿಗಳು ಇಲ್ಲಿಗೆ ಬಂದ ನಂತರ ಸಾವಿತ್ರಮ್ಮನ ಮಡಿಲು ಸೇರುತ್ತವೆ. ಮರಿಗಳನ್ನು ಪ್ರೀತಿಯಿಂದ ಆರೈಕೆ ಮಾಡುವುದು ಅವರಿಗೆ ಅತ್ಯಂತ ಖುಷಿಯ ಕೆಲಸ. ವನ್ಯಜೀವಿಗಳನ್ನು ಸ್ವಂತ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದಾರೆ. ಇದುವರೆಗೂ 50 ಚಿರತೆ, 15 ಸಿಂಹ, 7 ಹುಲಿ, ಹಲವಾರು ಜಿಂಕೆ ಮರಿಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಿಗಳನ್ನು ಅವರು ಬೆಳೆಸಿದ್ದಾರೆ. 

ADVERTISEMENT

ವನ್ಯಜೀವಿಗಳ ಮರಿಗಳನ್ನು ಸಾಕುವುದು ಅತ್ಯಂತ ಸವಾಲಿನ ಕೆಲಸ. ಮರಿಗಳ ನಡವಳಿಕೆ, ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳ ಬೇಕು, ಬೇಡಗಳನ್ನು ಅರ್ಥ ಮಾಡಿಕೊಂಡು ಕಾಳಜಿಯಿಂದ ಬೆಳಸಬೇಕು. ಆ ಕೆಲಸವನ್ನು ಸಾವಿತ್ರಮ್ಮ ವ್ರತದಂತೆ ಮಾಡುತ್ತಿದ್ದಾರೆ.

ಪುಟ್ಟ ಮರಿಗಳು ಆರೈಕೆಗಾಗಿ ಆಸ್ಪತ್ರೆಗೆ ಬಂದಾಗ ಕೆಲವೊಮ್ಮ ರಜೆಯನ್ನೂ ತೆಗೆದುಕೊಳ್ಳದೆ ಮರಿಗಳ ಲಾಲನೆ, ಪಾಲನೆಯಲ್ಲಿ ತೊಡಗಿದ ನಿದರ್ಶನಗಳಿವೆ. 

‘ಮರಿಗಳಿಗೆ ಬಾಟಲಿಯಲ್ಲಿ ಹಾಲು ಕುಡಿಸಬೇಕಾದರೆ ಹಲವಾರು ಬಾರಿ ಪರಚುತ್ತವೆ. ಕೈ, ಮೈ ಕಚ್ಚುತ್ತವೆ. ರಕ್ತ ಬರುತ್ತದೆ. ಒಂದು ತಿಂಗಳೊಳಗಿನ ಮರಿಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಬಾಟಲ್‌ ಮೂಲಕ ಹಾಲು ನೀಡಬೇಕಾಗುತ್ತದೆ’ ಎಂದು ಸಾವಿತ್ರಮ್ಮ ‘ಪ್ರಜಾವಾಣಿ’ ಜತೆ ಅನುಭವ ಬಿಚ್ಚಿಟ್ಟರು.

ವನ್ಯಜೀವಿಗಳ ಮರಿಗಳ ಮಲ, ಮೂತ್ರ ಸ್ವಚ್ಛ ಮಾಡುವುದು ಕಷ್ಟದ ಕೆಲಸ. ಪ್ರತಿದಿನ ಮರಿಗಳಿಗೆ ಬಳಸುವ ಬಟ್ಟೆಗಳನ್ನು ಬದಲಾಯಿಸಬೇಕಾಗುತ್ತದೆ. ಕೆಲವೊಮ್ಮೆ ಮರಿಗಳು ಮಲ, ಮೂತ್ರ ವಿಸರ್ಜನೆ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಹತ್ತಿ ಬಳಸಿ ಅವುಗಳ ಗುದದ್ವಾರದಲ್ಲಿ ಒತ್ತಡ ಹಾಕಬೇಕಾಗುತ್ತದೆ’ ಎನ್ನುತ್ತಾರೆ. ‘ಒಂದು-ಒಂದೂವರೆ ತಿಂಗಳ ನಂತರ ಮರಿಗಳಿಗೆ ಬಟ್ಟಲಿನಲ್ಲಿ ಹಾಲು ಹಾಕಿದರೆ ಕುಡಿಯುತ್ತವೆ. ಆದರೆ, ಪ್ರಾರಂಭದ ದಿನದಲ್ಲಿ ಒಂದೂವರೆ ತಿಂಗಳು ಸಾಕುವುದು ಅತ್ಯಂತ ಸವಾಲಿನ ಕೆಲಸ. 15-20 ನಿಮಿಷಗಳಿಗೊಮ್ಮೆ ಹಾಲು ನೀಡುತ್ತಿರಬೇಕು. ಈ ಕಾರ್ಯದಲ್ಲಿ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ’ ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ ಹೇಳುತ್ತಾರೆ.

ಸಾವಿತ್ರಮ್ಮ ಕಂಡರೆ ಸಾಕು ಉದ್ಯಾನದ ಚಿರತೆ ಮರಿಗಳು ಮಕ್ಕಳಂತೆ ಓಡಿ ಬಂದು ಮುತ್ತಿ ಕೊಂಡು ಚಿನ್ನಾಟವಾಡುತ್ತ ಪ್ರೀತಿಯ ಮಳೆಗರೆಯುತ್ತವೆ. ಸಾವಿತ್ರಮ್ಮ ಕೂಡ ಅಷ್ಟೇ ಎಲ್ಲ ಮರಿಗಳನ್ನೂ ಮಕ್ಕಳಂತೆ ಮುದ್ದಾಡುತ್ತಾರೆ. ಆಗ ಅವರ ಕಣ್ಣಲ್ಲಿ ಕಾಣುವ ಸಾರ್ಥಕ ಭಾವ, ಮೊಗದಲ್ಲಿ ಮೂಡುವ ಮಂದ ಹಾಸವನ್ನು ಸಹೋದ್ಯೋಗಿಗಳು ಕಣ್ತುಂಬಿಕೊಳ್ಳುತ್ತಾರೆ.

ವಿತ್ರಮ್ಮ ಅವರನ್ನು ಕಂಡೊಡನೆ ಓಡಿ ಬಂದು ಮುತ್ತಿಕೊಂಡ ಅನಾಥ ಚಿರತೆ ಮರಿಗಳು
ಬನ್ನೇರುಘಟ್ಟದಲ್ಲಿ ಹುಲಿ ಮರಿಯ ಪಾಲನೆಯಲ್ಲಿ ತೊಡಗಿರುವ ಸಾವಿತ್ರಮ್ಮ
ಸಾವಿತ್ರಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.