ADVERTISEMENT

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಪ್ರಚಾರ ಆರಂಭಿಸಿದ ಬಿಜೆಪಿ

ಶಾಸಕ ಧೀರಜ್‌ ಮುನಿರಾಜು ಮತಯಾಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:10 IST
Last Updated 14 ಡಿಸೆಂಬರ್ 2025, 6:10 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾಸಕ ಧೀರಜ್‌ ಮುನಿರಾಜು ಅವರು ಶನಿವಾರ ಪ್ರಚಾರ ನಡೆಸಿದರು  
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾಸಕ ಧೀರಜ್‌ ಮುನಿರಾಜು ಅವರು ಶನಿವಾರ ಪ್ರಚಾರ ನಡೆಸಿದರು     

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ ಶನಿವಾರದಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾಸಕ ಧೀರಜ್‌ ಮುನಿರಾಜು ಮತಯಾಚನೆಗೆ ಚಾಲನೆ ನೀಡಿದ್ದಾರೆ.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಎಲ್ಲಾ 19 ವಾರ್ಡ್‌ಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದೆ. ಮತದಾರರ ಮನೆಗಳಿಗೆ ಹಾಗೂ ಮುಖಂಡರನ್ನು ಭೇಟಿ ಮಾಡಿ ಬಿಜೆಪಿ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕಾರ ನೀಡುವಂತೆ ಮನವಿ ಮಾಡಲಾಗುತ್ತಿದೆ.

ಕೈಗಾರಿಕೆಗಳ ಸ್ಥಾಪನೆಯಿಂದಾಗಿ ವೇಗವಾಗಿ ಬೆಳೆಯುತ್ತಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಭಿವೃದ್ಧಿಯನ್ನು ಸಮಗ್ರವಾಗಿ ನೋಡಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಬಹುತೇಕ ಜನ ಜೆಡಿಎಸ್‌ ಹಾಗೂ ಇತರೆ ಪಕ್ಷದ ಮುಖಂಡರು ಬಿಜೆಪಿ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೆ ಬಲ ಬಂದಿದೆ ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ADVERTISEMENT

ಅಂತಿಮ ಕಣದಲ್ಲಿ 64 ಅಭ್ಯರ್ಥಿಗಳು: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಡಿ.21 ರಂದು ನಡೆಯಲಿರುವ ಚುನಾವಣೆಗೆ ಅಂತಿಮ ಕಣದಲ್ಲಿ 64 ಅಭ್ಯರ್ಥಿಗಳು ಉಳಿದಿದ್ದಾರೆ. 19 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ, ಒಟ್ಟು 82 ನಾಮಪತ್ರಗಳ ಪೈಕಿ 5 ನಾಮಪತ್ರಗಳು ತಿರಸ್ಕೃತವಾಗಿದ್ದವು. ಒಟ್ಟು 74 ಅಭ್ಯರ್ಥಿಗಳಿಂದ 77 ನಾಮಪತ್ರಗಳ ಸಲ್ಲಿಕೆಯಾಗಿ ಕ್ರಮಬದ್ಧವಾಗಿದ್ದವು. 10 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ. ಚುನಾವಣ ಅಂತಿಮ ಕಣದಲ್ಲಿ ಕಾಂಗ್ರೆಸ್‌ನಿಂದ 19, ಬಿಜೆಪಿಯಿಂದ 18, ಜೆಡಿಎಸ್‌ನಿಂದ 10 ಹಾಗೂ ಪಕ್ಷೇತರರಾಗಿ 17 ಅಭ್ಯರ್ಥಿಗಳು ಸೇರಿ 64 ಅಭ್ಯರ್ಥಿಗಳಿದ್ದಾರೆ.

ನಗರಸಭೆ ಉಪಚುನಾವಣೆ: ದೊಡ್ಡಬಳ್ಳಾಪುರ ನಗರಸಭೆಯ 21ನೇ ವಾರ್ಡ್‌ನ ಹೇಮಾವತಿಪೇಟೆ ಉಪಚುನಾವಣೆಗೆ ಒಟ್ಟು ನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಜಿ.ಆರ್‌.ಹೇಮಂತ್‌ಕುಮಾರ್‌ ಹಾಗೂ ರಘುನಂದನ್‌ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಬಿಜೆಪಿಯಿಂದ ಜಿ.ಜೆ.ನವೀನ್‌, ಕಾಂಗ್ರೆಸ್‌ ನಿಂದ ಕೆ.ಜಿ.ದಿನೇಶ ಇಬ್ಬರು ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.