
ಬೊಮ್ಮಸಂದ್ರ(ಆನೇಕಲ್): ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯ ಕಿತ್ತಗಾನಹಳ್ಳಿ ರಸ್ತೆ ಬದಿಯಲ್ಲಿ ಕಸ ಸುರಿಯಲಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡದ ಕಾರಣ ಕಸ ಕೊಳತೆ ದುರ್ನಾತ ಬೀರುತ್ತಿದ್ದು, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.
‘ಪುರಸಭೆ ವ್ಯಾಪ್ತಿ ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು’ ಎಂಬ ಫಲಕ ಹಾಕಿದ್ದರೂ ಅದೇ ಜಾಗದಲ್ಲಿ ಕಸ ಸುರಿಯಲಾಗುತ್ತಿದೆ. ಪುರಸಭೆಯ ವಾಹನಗಳು ಪ್ರತಿನಿತ್ಯ ಕಸ ಸಂಗ್ರಹಕ್ಕೆ ಮನೆಗಳ ಬಳಿ ಬಂದರೂ ತ್ಯಾಜ್ಯವನ್ನು ರಸ್ತೆ ಬದಿ ಸುರಿಯಲಾಗುತ್ತಿದೆ.
ಕಿತ್ತಾಗನಹಳ್ಳಿ ರಸ್ತೆಯ ಜಿಗಣಿ, ಹೊಸಹಳ್ಳಿ, ಶ್ರೀರಾಮಪುರ, ಕಾಚನಾಯಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಚಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಮುಖ್ಯರಸ್ತೆ ಇಕ್ಕೆಲ್ಲಗಳಲ್ಲಿ ಕಸ ಸುರಿಯುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಯಿಗಳ ಕಾಟ ಹೆಚ್ಚಾಗಿದೆ.
ಕಿತ್ತಗಾನಹಳ್ಳಿ ಮುಖ್ಯ ರಸ್ತೆಯ ಬದಿಗಳಲ್ಲಿ ಕಸ ಸುರಿಯಬಾರದು ಎಂದು ಬೊಮ್ಮಸಂದ್ರ ಪುರಸಭೆಯು ಹಲವು ಬಾರಿ ಎಚ್ಚರಿಕೆ ನೀಡಿ, ಇಲ್ಲಿ ಕಸ ಎಸೆಯುವವರಿಗೆ ಐದು ಸಾವಿರ ದಂಡ ಎಂದು ಫಲಕ ಹಾಕಲಾಗಿದೆ. ಆದರೆ ಕಸ ಎಸೆಯುವವರಿಗೆ ಇದ್ಯಾವುದೂ ಸಹ ಲೆಕ್ಕಕಿಲ್ಲದೇ ಮನೆಯ ತ್ಯಾಜ್ಯ ಮತ್ತು ಕಸವನ್ನು ರಸ್ತೆಯ ಬದಿಯಲ್ಲಿ ಸುರಿಯಲಾಗುತ್ತಿದೆ. ಹಸಿ ಮತ್ತು ಒಣ ಕಸ ಸೇರಿದಂತೆ ಎಲ್ಲಾ ರೀತಿಯ ಕಸವನ್ನು ಇಲ್ಲಿಯೇ ಸುರಿಯಲಾಗುತ್ತಿದೆ. ಇದರಿಂದ ಬೊಮ್ಮಸಂದ್ರದ ಪೌರಕಾರ್ಮಿಕರಿಗೂ ಸಹ ಸ್ವಚ್ಛತೆ ಕಾಪಾಡಲು ಕಷ್ಟವಾಗುತ್ತಿದೆ.
ಕಸ ಸುರಿದರೆ ದಂಡ ಎಂದು ನಾಮಫಲಕ ಅಳವಡಿಸಲಾಗಿದೆ ಅಷ್ಟೇ, ಆದರೆ ಇದರ ಮೇಲ್ವಿಚಾರಣೆಗೆ ಯಾವುದೇ ಸಿಬ್ಬಂದಿ ನಿಯೋಜಿಸಿಲ್ಲ. ಕಸ ಸುರಿಯುವವರಿಗೆ ದಂಡ ವಿಧಿಸಿಲ್ಲ. ಹೀಗಾಗಿ ಜನರು ಬೆದರದ ರಾಜರೋಷವಾಗಿ ರಸ್ತೆ ಇಕ್ಕೆಲ್ಲಗಳಲ್ಲಿ ಕಸ ಸುರಿಯುತ್ತಿದ್ದಾರೆ.
ಹೆಚ್ಚಾದ ನಾಯಿ ಕಾಟ: ರಸ್ತೆಯ ಬದಿಯಲ್ಲಿ ಕಸ ಎಸೆಯುತ್ತಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿದ್ದು, ಬೈಕ್ ಸವಾರರಿಗೆ ತೊಂದರೆ ನೀಡುತ್ತಿವೆ. ಏಕಾಏಕಿ ನಾಯಿಗಳು ನುಗ್ಗುವುದರಿಂದ ಹಲವು ಬಾರಿ ಬೈಕ್ ಸವಾರರಿಗೆ ಅಪಘಾತವಾಗಿದೆ. ಕಸ ಮತ್ತು ತ್ಯಾಜ್ಯವನ್ನು ತಿನ್ನಲು ನಾಯಿಗಳು ತಂಡಗಳಲ್ಲಿ ಬರುತ್ತವೆ. ಕಸ ಸುರಿಯವುದಕ್ಕೆ ಕಡಿವಾಣ ಹಾಕಿ, ನಾಯಿಗಳ ಕಾಟ ತಪ್ಪಿಸಿ ವಾಹನ ಸವಾರರು ಆಗ್ರಹಿಸಿದ್ದಾರೆ.
ದೇಗುಲ ಸಮೀಪ ಗಲೀಜು: ತಾಲ್ಲೂಕಿನ ಕಿತ್ತಗಾನಹಳ್ಳಿಯ ಶ್ರೀನಿವಾಸ ದೇವರು ಮತ್ತು ನಾಗೇಶ್ವರ ಸ್ವಾಮಿ ದೇವಾಲಯವು ಆನೇಕಲ್ ತಾಲ್ಲೂಕಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಆದರೆ ದೇಗುಲ ಮುಂಭಾಗವೇ ಕಸ ಸುರಿಯಲಾಗುತ್ತಿದೆ. ಇದರಿಂದ ಗಲೀಜು ತಾಂಡವವಾಡುತ್ತಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ.
ಅನಾಗರಿಕರಾಗಿ ವರ್ತಿಸದಿರಿ..
ಜನ ಅನಾಗರಿಕರಂತೆ ವರ್ತಿಸಿದಾಗ ಸ್ವಚ್ಛತೆ ಕಾಪಾಡುವುದು ಕಷ್ಟ. ಈ ಭಾಗದಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆ. ಕಿತ್ತಗಾನಹಳ್ಳಿ ಹೊರತು ಪಡಿಸಿ ಹೊರಗಡೆಯಿಂದ ಬಂದಿರುವವರೇ ಹೆಚ್ಚಿದ್ದಾರೆ. ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಹೋಗುವವರು ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಈ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮರ ಅಳವಡಿಸಬೇಕು ನಿತಿನ್ ಕಿತ್ತಗಾನಹಳ್ಳಿ ನಿವಾಸಿ ಕಸ ಸುರಿದರೆ; ಪೊಲೀಸ್ ಠಾಣೆಗೆ ದೂರು ಕಿತ್ತಗಾನಹಳ್ಳಿಯ ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಪುರಸಭೆಯು ದಂಡ ಹಾಕುವ ಫಲಕ ಹಾಕಲಾಗಿದೆ. ಆದರೂ ಕಸ ಹಾಕುತ್ತಿರುವುದು ಗಮನಕ್ಕೆ ಬಂದಿದ್ದು ಶೀಘ್ರದಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಕಸ ಸುರಿಯುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಪುರಸಭೆಯ ವಾಹನಕ್ಕೆ ಕಸ ನೀಡುವುದರಿಂದ ಸ್ವಚ್ಛತೆಗೆ ಬಲ ನೀಡಿದಂತಾಗುತ್ತದೆ ವೆಂಕಟೇಶ್ ಮುಖ್ಯಾಧಿಕಾರಿ ಬೊಮ್ಮಸಂದ್ರ ಪುರಸಭೆ
ಕಿತ್ತಗಾನಹಳ್ಳಿ ದೇವಾಲಯದ ಜಾತ್ರೆ ಶೀಘ್ರದಲ್ಲೇ ನಡೆಯಲಿದೆ. ದೇವಾಲಯದ ಮುಂಭಾಗದಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ವಹಿಸಬೇಕು ಮತ್ತು ಇಲ್ಲಿ ಕಸ ಸುರಿಯದಂತೆ ಮಾಡಬೇಕುವೆಂಕಟೇಶ್ ಭಟ್, ಸ್ಥಳೀಯ
ಕಿತ್ತಗಾನಹಳ್ಳಿ ರಸ್ತೆಯು ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮುಖ್ಯ ರಸ್ತೆಯಾಗಿದೆ. ಈ ಭಾಗದಲ್ಲಿ ಹಲವಾರು ಪಿಜಿಗಳಿವೆ ಬಾಡಿಗೆ ಮನೆಗಳಿವೆ ಇವರು ಕಡ್ಡಾಯವಾಗಿ ಕಸವನ್ನು ಪುರಸಭೆಯ ವಾಹನಗಳಿಗೆ ಮಾತ್ರ ನೀಡುವಂತೆ ಜಾಗೃತಿ ಮೂಡಿಸಬೇಕು.ಸಂದೇಶ್, ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.