ADVERTISEMENT

ಲಂಚ| ಬಿಜೆಪಿ ಮೇಲೆ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ

ಮಾಡಾಳ್ ಲಂಚ ಸ್ವೀಕಾರ ಪ್ರಕರಣದ ಬಗ್ಗೆ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 5:01 IST
Last Updated 5 ಮಾರ್ಚ್ 2023, 5:01 IST
   

ದೊಡ್ಡಬಳ್ಳಾಪುರ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಿಂದ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಶಾಸಕ ಮಾಡಾಳ್ ಪುತ್ರನ ಪ್ರಕರಣವನ್ನು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಲಿದೆ. ದಾಳಿ ವೇಳೆ ಸಿಕ್ಕ ಹಣ ಅಕ್ರಮವಾಗಿದ್ದರೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

‘ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯಕ್ತಕ್ಕೆ ಸಿಕ್ಕಿಬಿದ್ದ ತಕ್ಷಣ ನೈತಿಕ ಹೊಣೆ ಹೊತ್ತು ಶಾಸಕ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯ ಕುತ್ತಿಗೆ ಹಿಸುಕಿತು. ಆಗ ಲೋಕಾಯುಕ್ತ ಇದ್ದಿದ್ದರೆ ಕಾಂಗ್ರೆಸ್‌ನ ಹಲವು ಪ್ರಮುಖರು ಇಂದು ಜೈಲಿನಲ್ಲಿರಬೇಕಿತ್ತು. ನಾವು ಇಂದು ಲೋಕಾಯುಕ್ತಕ್ಕೆ ಸಂಪೂರ್ಣ ಶಕ್ತಿ ನೀಡಿದ್ದೇವೆ. ಹೀಗಾಗಿ ಪಕ್ಷಾತೀತವಾಗಿ ದಾಳಿಗಳು ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಎಂಬ ವ್ಯತ್ಯಾಸವಿಲ್ಲ’ ಎಂದು ಹೇಳಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡರ ಮನೆ ಮತ್ತು ಕಚೇರಿಗಳಲ್ಲಿ ಕಂತೆ–ಕಂತೆ ದುಡ್ಡು ಸಿಕ್ಕಿರುವ ಉದಾಹರಣೆಗಳಿವೆ. ಇಷ್ಟೆಲ್ಲ ಆಗಿದ್ದರೂ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದರು.

ಸೈಬರ್ ಅಪರಾಧ ನಿಗ್ರಹಕ್ಕೆ ಕ್ರಮ: ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧ ವಿಭಾಗವನ್ನು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಸೈಬರ್ ವಂಚನೆಗೊಳ
ಗಾದ(ಗೋಲ್ಡನ್ ಹವರ್)ವರು ಎರಡು ಗಂಟೆಗಳ ಒಳಗೆ 112 ಸಂಖ್ಯೆಗೆ ಕರೆ ಮಾಡಿ ವಿವರ ನೀಡಿದರೆ, ಸಂತ್ರಸ್ತರ ಹಣ ಸಂದಾಯವಾಗಿರುವ ಖಾತೆಯನ್ನು ನಿಷ್ಕ್ರಿಯ(ಫ್ರೀಜ್)ಗೊಳಿಸಲಾಗುತ್ತದೆ. ಈ ಕುರಿತು ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಇಡೀ ಭಾರತದಲ್ಲೇ ಕರ್ನಾಟಕ ಸೈಬರ್ ಪೊಲೀಸ್ ವಿಭಾಗ ಅಗ್ರ ಸ್ಥಾನದಲ್ಲಿದೆ. ಇದಕ್ಕಾಗಿ ಸಿಐಡಿ ಇಲಾಖೆಯ ಕಟ್ಟಡದಲ್ಲಿ ಒಂದು ಮಹಡಿಯನ್ನೇ ಮೀಸಲಿಡಲಾಗಿದ್ದು, ಸೈಬರ್ ಅಪರಾಧ ನಿಗ್ರಹಕ್ಕೆ ಅಗತ್ಯವಿರುವ ಸಲಕರಣೆಗಳಿಂದ ಸಿದ್ಧಗೊಳಿಸಲಾಗಿದೆ. ಅನ್ಯ ರಾಜ್ಯಗಳ ಪೊಲೀಸ್ ತಂಡ, ಇಲ್ಲಿಗೆ ಬಂದು ಅಧ್ಯಯನ ಮಾಡುವಷ್ಟು ಅಭಿವೃದ್ಧಿ ಮಾಡಲಾಗಿದೆ ಎಂದರು.

ಸಿಂಧೂರಿ, ರೂಪಾ ವಿರುದ್ಧ ಕ್ರಮ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಜಗಳದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇಬ್ಬರಿಗೂ ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ದರೂ, ವೈಯಕ್ತಿಕ ಜಗಳವನ್ನು ಮುಂದುವರಿಸಿದ್ದಾರೆ. ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿ ಕೊರತೆ: ಕಾಂಗ್ರೆಸ್ ಆಡಳಿತ ಸಮಯದಲ್ಲಿ ಖಾಲಿ ಉಳಿದಿದ್ದ 35 ಸಾವಿರ ಪೊಲೀಸ್‌ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಾಕಿ 12 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ. ಸಬ್‌ ಇನ್‌ಸ್ಪೆಕ್ಟರ್ ಹಗರಣ ನಡೆಯದಿದ್ದರೆ, ಹುದ್ದೆಗಳನ್ನು ತುಂಬಿ, ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ತಪ್ಪಿಸಬಹುದಿತ್ತು ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ

ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ಈ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಧಿಕಾರಿಗಳದ್ದು ಏನು ತಪ್ಪಿದೆ. ಯಾಕಾಗಿ ಈ ಪ್ರಕರಣ ನಡೆಯಿತು ಎಂಬ ಬಗ್ಗೆ ತನಿಖೆಯಿಂದ ತಿಳಿಯಲಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೇನಾದರೂ ಇದ್ದರೆ ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.