ADVERTISEMENT

ಬಯಲುಸೀಮೆ ರೈತರಿಗೆ ಬಜೆಟ್‌ನಲ್ಲಿ ಅನ್ಯಾಯ

ನೀರಾವರಿ ತಜ್ಞ ಮಳ್ಳೂರು ಶಿವಣ್ಣ ಬೇಸರ * ಗ್ರಾಮಾಂತರ ಜಿಲ್ಲೆ ಷಯದಲ್ಲಿ ಮಲತಾಯಿ ಧೋರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:43 IST
Last Updated 5 ಜುಲೈ 2018, 17:43 IST

ವಿಜಯಪುರ: ಬಯಲುಸೀಮೆ ಭಾಗದರೈತರ ನಿರೀಕ್ಷೆಯಾಗಿದ್ದ ನೀರಾವರಿ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಸ್ಪಷ್ಟತೆ ಇಲ್ಲ ಎಂದು ನೀರಾವರಿ ತಜ್ಞ ಮಳ್ಳೂರು ಶಿವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

‘ಬಜೆಟ್‌ ಬಗ್ಗೆ ಬಹಳಷ್ಟು ನಿರೀಕ್ಷೆ ಇತ್ತು. ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಹಾಲು, ಹಣ್ಣು, ತರಕಾರಿ ಪೂರೈಕೆ ಮಾಡಿ ಜನರ ಹಸಿವು ನೀಗಿಸಿದ್ದ ರೈತರು ನೀರಿಗಾಗಿ ಸರ್ಕಾರಗಳ ಮುಂದೆ ಭಿಕ್ಷೆ ಬೇಡುವಂತಾಗಿದೆ. ನಾವು ಎಷ್ಟೇ ಗಟ್ಟಿಯಾಗಿ ಕೂಗಿದರೂ ಸರ್ಕಾರ ನಮ್ಮ ಕೂಗು ಕೇಳಿಸಿಕೊಂಡಂತೆ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಮಗೆ ಕುಡಿಯಲು ನೀರು ಇಲ್ಲದಿದ್ದರೂ ರಾಜ್ಯಕ್ಕೆ 11 ಲಕ್ಷ 25 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡಿಕೊಡುತ್ತಿದ್ದೇವೆ. ಶೇ 58ರಷ್ಟು ಮಾವು ಬೆಳೆಯುತ್ತೇವೆ. ಹೆಚ್ಚು ರೇಷ್ಮೆ ಉತ್ಪಾದನೆ ಮಾಡುತ್ತೇವೆ. ಶೈಕ್ಷಣಿಕವಾಗಿ ಮುಂದಿದ್ದೇವೆ. ಆದರೆ, ಶೈಕ್ಷಣಿಕ ಸೌಲಭ್ಯಗಳಿಂದ ಹಿಂದುಳಿದಿದ್ದೇವೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ನತದೃಷ್ಟ ಜಿಲ್ಲೆಗಳ ವಿಷಯದಲ್ಲಿ ಮಲತಾಯಿ ಧೋರಣೆ ಮಾಡಿಕೊಂಡೇ ಬರುತ್ತಿವೆ’ ಎಂದರು.

ADVERTISEMENT

₹2ಲಕ್ಷದವರೆಗೂ ಸಾಲಮನ್ನಾ ಮಾಡಿರುವುದರಿಂದ ಬೆರೆಳೆಣಿಕೆಯಷ್ಟು ರೈತರಿಗೆ ನ್ಯಾಯ ಸಿಗಬಹುದು. ನಿಜವಾಗಲೂ ಬೆಳೆ ಬೆಳೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾವು, ದ್ರಾಕ್ಷಿ, ರೇಷ್ಮೆ, ಟೊಮೊಟೊ ಬೆಳೆದು ನಷ್ಟವಾಗಿದೆ. ಸರಿಯಾದ ವರದಿಯನ್ನು ಸರ್ಕಾರ ಪಡೆದುಕೊಂಡಿಲ್ಲ ಎಂದು ಹೇಳಿದರು.

‘ಹಾಲಿಗೆ ಕೊಡುವ ಪ್ರೋತ್ಸಾಹಧನ ರೀತಿಯಲ್ಲಿ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಿದರೆ ಅನುಕೂಲವಾಗುತ್ತಿತ್ತು. ರೇಷ್ಮೆ ಶೇ 40ರಷ್ಟು ಉತ್ಪಾದನೆ ಮಾಡುತ್ತಿದ್ದೇವೆ. ಶೇ100 ರಷ್ಟು ನೀರಿನ ಕೊರತೆ ಇದ್ದರೂ ಈ ಭಾಗದ ರೈತರನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.

ರೈತ ಮುನಿರಾಜು ಮಾತನಾಡಿ, ‘ವಿಜಯಪುರ ಸುತ್ತಮುತ್ತಲಿನ ಭಾಗದಲ್ಲಿನ ಬಹಳಷ್ಟು ರೈತರು, ದ್ರಾಕ್ಷಿ ವಾಣಿಜ್ಯ ಬೆಳೆಯನ್ನಾಗಿ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಬಹಳಷ್ಟು ವರ್ಷಗಳಿಂದ ಈ ಭಾಗದ ರೈತರು ಅಕಾಲಿಕ ಮಳೆ, ಆಲಿಕಲ್ಲಿನ ಮಳೆಯಂತಹ ಅವಘಡಗಳಿಗೆ ಒಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿ, ರೈತರಿಗೆ ಅನುಕೂಲ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಸರ್ಕಾರ ಈ ವಿಚಾರವಾಗಿ ಗಮನವನ್ನೇ ಹರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಬಿ.ಕೆ.ಶಿವಪ್ಪ ಮಾತನಾಡಿ, ವಿಜಯಪುರ ತಾಲ್ಲೂಕು ಕೇಂದ್ರ ಮಾಡಬೇಕು ಎನ್ನುವ ಬೇಡಿಕೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಲಾಗಿದೆ. ದೇವನಹಳ್ಳಿಗೆ ಬಂದಿದ್ದ ಕುಮಾರಸ್ವಾಮಿ ಅವರು, ತಾಲ್ಲೂಕು ಕೇಂದ್ರ ಮಾಡುವ ಭರವಸೆ ನೀಡಿದ್ದರು. ಈ ಬಾರಿ ಬಜೆಟ್ ನಲ್ಲಿ ಘೋಷಣೆ ಮಾಡಬಹುದೆನ್ನುವ ನಿರೀಕ್ಷೆ ಇತ್ತಾದರೂ, ಸ್ಥಳೀಯ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಾಧ್ಯವಾಗಿಲ್ಲ. ಇದರಿಂದ ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ಹಿನ್ನಡೆಯಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.