ADVERTISEMENT

ದೊಡ್ಡಬಳ್ಳಾಪುರ: ಕಸ- ಪಟ್ಟು ಸಡಿಲಿಸದ ಗ್ರಾಮಸ್ಥರು

ಧರಣಿ ಅಂತ್ಯಗೊಳಿಸಲು ಅಧಿಕಾರಶಾಹಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:59 IST
Last Updated 29 ನವೆಂಬರ್ 2021, 4:59 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಭಾನುವಾರದಂದು ನಾಲ್ಕನೇ ದಿನವೂ ಧರಣಿ ಮುಂದುವರಿಸಿರುವ ಗ್ರಾಮಸ್ಥರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಭಾನುವಾರದಂದು ನಾಲ್ಕನೇ ದಿನವೂ ಧರಣಿ ಮುಂದುವರಿಸಿರುವ ಗ್ರಾಮಸ್ಥರು   

ದೊಡ್ಡಬಳ್ಳಾಪುರ:ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಹೊರಬರುತ್ತಿರುವ ರಾಸಾಯನಿಕಯುಕ್ತ ಕೊಳಚೆ ನೀರು ತಡೆ ಸಂಬಂಧ ತಡೆಗೋಡೆ ನಿರ್ಮಿಸುವ ಸಲುವಾಗಿ ಕಟ್ಟಡ ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲು ರಸ್ತೆ ತಡೆ ತೆರವು ಮಾಡುವಂತೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ಮಾಡಿದ ಮನವಿಗೆ ಧರಣಿನಿರತ ಗ್ರಾಮಸ್ಥರು ನಿರಾಕರಿಸಿದರು. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಭಾನುವಾರ ಅಧಿಕಾರಿಗಳು ವಾ‍ಪಸ್‌ ಹೋದರು.

ತಹಶೀಲ್ದಾರ್‌ ಟಿ.ಎಸ್‌. ಶಿವರಾಜು, ಡಿವೈಎಸ್‌ಪಿ ನಾಗರಾಜ್‌ ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು.

ಕಸದಿಂದ ಉಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ಹಾಗೂ ಕೊಳಚೆ ನೀರು ಗ್ರಾಮಗಳತ್ತ ಹಳ್ಳಗಳ ಮೂಲಕ ಹರಿದು ಬರದಂತೆ ತಡೆಯುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಧರಣಿ ನಿರತರು, ಈ ಎಲ್ಲಾ ಸಮಸ್ಯೆಗಳಿಗೆ ಮೂಲಕಾರಣವಾಗಿರುವ ತ್ಯಾಜ್ಯವನ್ನು ಇಲ್ಲಿಗೆ ಬರುವುದನ್ನು ನಿಲ್ಲಿಸಬೇಕು. ಉಳಿದೆಲ್ಲಾ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ ಎಂದು ಹೇಳಿದರು.

ಕೆ.ವಿ. ಸತ್ಯಪ್ರಕಾಶ್‌, ಅಶ್ವತ್ಥನಾರಾಯಣಗೌಡ, ಗೋವಿಂದರಾಜು, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ತಾಲ್ಲೂಕು ಆಡಳಿತ ಸೇರಿದಂತೆ ಧರಣಿ ಸ್ಥಳಕ್ಕೆ ಭೇಟಿ ನೀಡುತ್ತಿರುವ ಎಲ್ಲಾ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕುರಿತು ಬಣ್ಣದ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿಯ ಬಣ್ಣದ ಮಾತುಗಳನ್ನು ಎರಡು ವರ್ಷಗಳ ಹಿಂದೆ ಧರಣಿ ನಡೆಸಿದಾಗಲೂ ಹೇಳಲಾಗಿತ್ತು ಎಂದು ಟೀಕಿಸಿದರು.

ಆ ವೇಳೆ ಅಧಿಕಾರಿಗಳ ಮಾತು ನಂಬಿಯೇ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಹೋರಾಟ ಅಂತ್ಯಗೊಂಡ ದಿನ ಕಣ್ಮರೆಯಾದ ಅಧಿಕಾರಿಗಳು ಈಗ ಧರಣಿ ಆರಂಭವಾಗುತ್ತಿದ್ದಂತೆ ಮತ್ತೆ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ಸಚಿವರನ್ನು ಮೆಚ್ಚಿಸಲು ನಾಟಕ ಮಾಡುತ್ತಿದ್ದಾರೆ. ಬೆಂಗಳೂರಿನ ಕಸವನ್ನು ಇಲ್ಲಿಗೆ ತರುವುದನ್ನು ನಿಲ್ಲಿಸುವ ಕುರಿತಂತೆ ಲಿಖಿತವಾಗಿ ಮಾಹಿತಿ ನೀಡಿದರಷ್ಟೆ ಧರಣಿಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರು.

ವೈರಲ್‌ ಆದ ಮನವಿ:ಧರಣಿ ಬೆಂಬಲಿಸುವಂತೆ ಹಾಗೂ ಅಂತ್ಯಗೊಳಿಸಲು ಪೊಲೀಸರು ಸೃಷ್ಟಿಸುತ್ತಿರುವ ಭಯದ ವಾತಾವರಣ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡತಿಪ್ಪೂರು ಗ್ರಾಮದ ಕೃಷ್ಣಮೂರ್ತಿ ಅವರು ಬರೆದುಕೊಂಡಿರುವ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಸ ವಿಲೇವಾರಿ ಘಟಕದಿಂದ ಇಲ್ಲಿನ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ, ಹೋರಾಟ ಹತ್ತಿಕ್ಕಲು ರಾಜಕೀಯ ಮುಖಂಡರು ನಡೆಸುತ್ತಿರುವ ಅಪಪ್ರಚಾರ, ಹೋರಾಟ ಯಶಸ್ವಿಯಾಗದಿದ್ದರೆ ಇಲ್ಲಿನ ಪರಿಸರಕ್ಕೆ ಆಗುವ ತೊಂದರೆ ಕುರಿತಂತೆ ಅವರು ಬರೆದುಕೊಂಡಿದ್ದಾರೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.