ವಿಜಯಪುರ (ದೇವನಹಳ್ಳಿ): ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ವ್ಯವಹಾರ ಜ್ಞಾನ ವೃದ್ಧಿಸಲು ಶುಕ್ರವಾರ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.
ಮೇಳದಲ್ಲಿ 8, 9 ಮತ್ತು 10 ನೇ ತರಗತಿಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಆವರಣದಲ್ಲಿ 30ಕ್ಕೂ ಹೆಚ್ಚು ನಾನಾ ಬಗೆಯ ವಸ್ತುಗಳ ಮಾರಾಟ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ವಿವಿಧ ಶಾಲೆಯ ಮಕ್ಕಳು, ಸಾರ್ವಜನಿಕರು ಗ್ರಾಹಕರಾಗಿದ್ದರು.
ಮಳಿಗೆಗಳಲ್ಲಿ ತಾಜಾ ಹಣ್ಣು, ತರಕಾರಿ, ಬಣ್ಣ, ಬಣ್ಣದ ಉಡುಪು, ಸೌಂದರ್ಯ ವರ್ಧಕಗಳು, ಸಿಹಿ ತಿನಿಸು, ವೆಜ್ ಹಾಗೂ ನಾನ್ ವೇಜ್ ಊಟದ ಟೆಂಟ್ ಸೇರಿದಂತೆ ನಾನಾ ಬಗೆಯ ವಸ್ತುಗಳ ಮಾರಾಟದಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಿದ್ದರು. ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಮೆಟ್ರಿಕ್ ಮೇಳವನ್ನು ಪುರಸಭಾ ಮಾಜಿ ಅಧ್ಯಕ್ಷೆ ವಿಮಲಾ ಬಸವರಾಜ್ ಉದ್ಘಾಟಿಸಿ ಮಾತನಾಡಿದ ಅವರು, ತರಗತಿಯಲ್ಲಿ ಪಾಠದ ಜೊತೆಗೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವುದು, ತರಗತಿಯಲ್ಲಿ ಪಡೆದ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಈ ಮೇಳದ ಉದ್ದೇಶವಾಗಿದೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನೀಪುಲ್ ಮಾತನಾಡಿ, ಮೇಳದಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಗಣಿತದ ಲೆಕ್ಕಗಳನ್ನು ಸರಳಗೊಳಿಸುವ ತಂತ್ರವನ್ನು ವಿದ್ಯಾರ್ಥಿಗಳು ಅರಿಯುತ್ತಾರೆ ಎಂದರು.
ಪ್ರಭಾರಿ ಉಪಪ್ರಾಂಶುಪಾಲ ಬಿ.ಎಸ್.ನಾರಾಯಣ್, ಚಿಕ್ಕನಹಳ್ಳಿ ವೆಂಕಟೇಶ್, ಬೇಕರಿ ಆನಂದಪ್ಪ, ಅಶ್ವಥ್, ಪುರಸಭಾ ಸದಸ್ಯ ಎಂ.ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ವೆಂಕಟೇಶ್, ಪವನ್ ಜೋಷಿ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.