ADVERTISEMENT

ದ್ರಾಕ್ಷಿ ಕಟಾವಿಗೆ ವ್ಯಾಪಾರಸ್ಥರ ಹಿಂದೇಟು: ರೈತರಲ್ಲಿ ಆತಂಕ

ಕಡಿಮೆ ಬೆಲೆಗೆ ನೀಡಬೇಕಿರುವ ಪರಿಸ್ಥಿತಿ, ವೈಜ್ಞಾನಿಕ ಬೆಲೆ ನಿಗದಿಗೆ ರೈತರ ಮನವಿ

ಎಂ.ಮುನಿನಾರಾಯಣ
Published 17 ಡಿಸೆಂಬರ್ 2019, 19:30 IST
Last Updated 17 ಡಿಸೆಂಬರ್ 2019, 19:30 IST
ವಿಜಯಪುರ ಹೋಬಳಿ ಬೀಡಿಗಾನಹಳ್ಳಿ ಬಳಿ ಕಟಾವಿಗೆ ಬಂದಿರುವ ಬೆಂಗಳೂರು ಬ್ಲೂ ದ್ರಾಕ್ಷಿ
ವಿಜಯಪುರ ಹೋಬಳಿ ಬೀಡಿಗಾನಹಳ್ಳಿ ಬಳಿ ಕಟಾವಿಗೆ ಬಂದಿರುವ ಬೆಂಗಳೂರು ಬ್ಲೂ ದ್ರಾಕ್ಷಿ   

ವಿಜಯಪುರ: ನೀರಿನ ಅಭಾವ, ಪದೇ ಪದೇ ಕಾಡುತ್ತಿರುವ ರೋಗಗಳು, ನಿತ್ಯ ಬದಲಾವಣೆಯಾಗುತ್ತಿರುವ ಹವಾಮಾನದ ನಡುವೆಯೂ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಬೆಳೆ ಕಟಾವಿಗೆ ವ್ಯಾಪಾರಸ್ಥರು ಬಾರದ ಕಾರಣ ರೈತರು ಕಂಗಾಲಾಗುವಂತಾಗಿದೆ ಎಂದು ರೈತ ಜಯರಾಮಪ್ಪ ಅಳಲು ತೋಡಿಕೊಂಡರು.

ಇಲ್ಲಿನ ಬಹುತೇಕ ರೈತರು ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಯನ್ನು ನಂಬಿ ಜೀವನ ರೂಪಿಸಿಕೊಂಡಿದ್ದಾರೆ. ಬೆಂಗಳೂರು ಬ್ಲೂ, ರೆಡ್‌ಗ್ಲೋಬ್, ಸೋನಕಾ, ದಿಲ್‌ಕುಶ್ ಸೇರಿದಂತೆ ಹಲವು ತಳಿಯ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದಾರೆ.

ಎಲ್ಲ ರೀತಿಯ ಹವಾಮಾನದಲ್ಲೂ ಬೆಳೆಗೆ ಉಂಟಾಗುವ ರೋಗ ನಿಯಂತ್ರಣ ಮಾಡಿ, ಉತ್ತಮ ಗುಣಮಟ್ಟದ ಬೆಳೆ ಬೆಳೆದರೂ ಅದನ್ನು ಕಟಾವು ಮಾಡಿಕೊಂಡು ಹೋಗುವಂತೆ ವ್ಯಾಪಾರಸ್ಥರು, ಹಾಗೂ ಮಧ್ಯವರ್ತಿಗಳಿಗೆ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ ಎಂಬುದು ಅವರ ಆತಂಕ.

ADVERTISEMENT

ಬೆಂಗಳೂರು ಬ್ಲೂ ದ್ರಾಕ್ಷಿ ಕೆ.ಜಿಗೆ ₹ 50ರಿಂದ ₹ 60 ಇದ್ದದ್ದು ಈಗ ₹ 23ಕ್ಕೆ ಕುಸಿದಿರುವ ಕಾರಣ, ಹಾಕಿದ ಬಂಡವಾಳ ಹಿಂತಿರುಗುವ ಅನುಮಾನದ ಆತಂಕವೂರೈತರನ್ನು ಕಾಡುತ್ತಿದೆ. ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ದ್ರಾಕ್ಷಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹೆಚ್ಚು ಬೇಡಿಕೆ ಹೊಂದಿದ್ದರೂ ಸರ್ಕಾರದಿಂದ ಮಾರುಕಟ್ಟೆ ಸೌಲಭ್ಯ ಕಲ್ಪಿಸದ ಕಾರಣ, ರೈತರು ಸ್ಥಳೀಯ ವ್ಯಾಪಾರಸ್ಥರನ್ನೆ ನಂಬಿಕೊಳ್ಳುವಂತಾಗಿದೆ.

‘ದ್ರಾಕ್ಷಿ ಹಣ್ಣು ಬಣ್ಣಕ್ಕೆ ತಿರುಗುತ್ತಿದ್ದಂತೆ ತೋಟಗಳಿಗೆ ಲಗ್ಗೆ ಇಡುವ ವ್ಯಾಪಾರಸ್ಥರು ಕೇಳಿದಷ್ಟು ಬೆಲೆಗೆ ಮಾರಾಟ ಮಾಡಬೇಕು. ಅವರು ಕೇಳಿದಷ್ಟು ಬೆಲೆಗೆ ಕೊಡದಿದ್ದರೆ ವಾಪಸ್‌ ಹೋಗುತ್ತಾರೆ. ನಾವು ಅವರ ಹಿಂದೆ ಬೀಳಬೇಕು. ಅವರು ಕೇಳಿದಷ್ಟು ಬೆಲೆಗೆ ಕೊಟ್ಟರೂ ಪೂರ್ತಿ ಹಣ್ಣಾಗುವ ತನಕ ಕಟಾವು ಮಾಡುವುದಿಲ್ಲ. ಹಣ್ಣಾದ ಮೇಲೆ ಮತ್ತೆ ಕಡಿಮೆ ಬೆಲೆಗೆ ಕೇಳುತ್ತಾರೆ. ಕಟಾವು ಮಾಡಿಸದಿದ್ದರೆ ನಮಗೆ ವಿಧಿಯಿಲ್ಲ. ತುಂಬಾ ಹಣ್ಣಾದರೆ ಜೇನುನೊಣಗಳು ತೋಟವನ್ನು ಹಾಳು ಮಾಡುತ್ತವೆ ಎನ್ನುವ ಕಾರಣಕ್ಕೆ ವ್ಯಾಪಾರಸ್ಥರ ಬಳಿ ದುಂಬಾಲು ಬಿದ್ದು ತೋಟ ಖಾಲಿ ಮಾಡಿಸುತ್ತೇವೆ. ಈಗ ಹಣ್ಣಾಗಿರುವ ತೋಟಗಳನ್ನು ಖಾಲಿ ಮಾಡಲು ಪರದಾಡುತ್ತಿದ್ದೇವೆ’ ಎಂದು ಹೇಳಿದರು.

ವ್ಯಾಪಾರಸ್ಥರು ಕೊಟ್ಟಷ್ಟೆ ಹಣ ಪಡೆಯಬೇಕು:‘ದ್ರಾಕ್ಷಿ ತೋಟಗಳಿಂದ ಹಣ್ಣು ಕಟಾವು ಮಾಡಿಕೊಂಡು ಹೋಗುವಾಗ ಬಿಳಿ ಚೀಟಿಯಲ್ಲಿ ಬಾಕ್ಸ್‌ಗಳ ಲೆಕ್ಕ,(ಕೆ.ಜಿ.ಗಳಲ್ಲಿ) ವಾಹನದ ಸಂಖ್ಯೆ ಬರೆದು ಕೊಡುತ್ತಾರೆ. ಈ ಬಿಳಿ ಚೀಟಿಗಳನ್ನು ಜೋಪಾನವಾಗಿಟ್ಟುಕೊಂಡು ತೋಟವೆಲ್ಲ ಖಾಲಿಯಾದ ನಂತರ ವ್ಯಾಪಾರಸ್ಥರು ಕರೆದಾಗ ಹೋಗಿ ಲೆಕ್ಕಾಚಾರ ಮಾಡಿಕೊಳ್ಳಬೇಕು. ವ್ಯಾಪಾರವಾಗಿರುವುದರಲ್ಲಿ ಒಂದಷ್ಟು ಹಣ ಕಡಿತಗೊಳಿಸುತ್ತಾರೆ. ಒಂದೇ ಬಾರಿಗೆ ಹಣ ಕೊಡುವುದಿಲ್ಲ. ಅವರು ಕೊಟ್ಟಷ್ಟು ತೆಗೆದುಕೊಂಡು ಬರಬೇಕು’ ಎಂದು ರೈತ ವೆಂಕಟರಮಣಪ್ಪ ತಿಳಿಸಿದರು.

‘ಮುಂದಿನ ಬೆಳೆಗೆ ಗೊಬ್ಬರ ಹಾಕಬೇಕು, ಔಷಧಿಗೆ ಹಣ ಕೊಡಬೇಕು, ಕಡ್ಡಿ ಪ್ರೂನಿಂಗ್ ಮಾಡಿಸಬೇಕು, ಪಂಪು ಮೋಟಾರುಗಳು ಕೆಟ್ಟರೆ ಸಾವಿರಾರು ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿಸಬೇಕು. ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಾ ಜೀವನ ರೂಪಿಸಿಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

‘ದ್ರಾಕ್ಷಿ ಬೆಳೆಗಾರರ ಸಂಘದಿಂದ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿ, ದ್ರಾಕ್ಷಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಕೇಳಿಕೊಂಡರೂ ಸರ್ಕಾರ ಈ ಕುರಿತು ಗಮನಹರಿಸುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.