
ಬೆಂಗಳೂರು ಗ್ರಾ: ಅಂತಿಮ ಹಂತದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 88.63ರಷ್ಟು ಪ್ರಗತಿ ಕಂಡಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 12.26 ಲಕ್ಷ ಜನಸಂಖ್ಯೆ ಹಾಗೂ 3.85 ಲಕ್ಷ ಮನೆಗಳ ಸಮೀಕ್ಷೆ ನಡೆಯುತ್ತಿದ್ದು, ಈವರೆಗೆ 3.34 ಲಕ್ಷ ಮನೆಗಳ ಸಮೀಕ್ಷೆ ಮುಗಿದಿದೆ.
ಬೆಸ್ಕಾಂನಿಂದ ಜಿಲ್ಲೆಯಲ್ಲಿ ಗುರುತಿಸಲಾದ (ಯುಎಚ್‌ಐಡಿ- ಯುನಿಕ್ ಐಡೆಂಟಿಫಿಕೇಶನ್ ನಂಬರ್) 51ಸಾವಿರ ಮನೆಗಳ ಸಮೀಕ್ಷೆ ಬಾಕಿ ಉಳಿದಿದೆ. ಇದೇ 31ರವರೆಗೆ ಗಣತಿ ಮುಂದುವರೆಯಲಿದೆ.
ಇಲ್ಲಿಯವರೆಗೆ ನಡೆದ ಸಮೀಕ್ಷೆಯಲ್ಲಿ 96.03 ರಷ್ಟು ಪ್ರಗತಿ ಸಾಧಿಸಿರುವ ಹೊಸಕೋಟೆ ತಾಲ್ಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಶೇ.82.10ರಷ್ಟು ಗಣತಿ ಪೂರ್ಣಗೊಳಿಸಿರುವ ದೊಡ್ಡಬಳ್ಳಾಪುರ ನಾಲ್ಕನೇ ಸ್ಥಾನದಲ್ಲಿದೆ.
ಹೆಚ್ಚು ಮನೆಗಳನ್ನು ಹೊಂದಿರುವ ಜಿಲ್ಲೆಯ ಎರಡನೇ ದೊಡ್ಡ ತಾಲ್ಲೂಕು ದೊಡ್ಡಬಳ್ಳಾಪುರ ಸಮೀಕ್ಷೆಯಲ್ಲಿ ಹಿಂದುಳಿದಿದೆ. ಸಮೀಕ್ಷೆಗೆ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 1,24,036 ಮನೆ ಹಾಗೂ ದೊಡ್ಡಬಳ್ಳಾಪುರದಲ್ಲಿ 98,375 ಮನೆ ಗುರುತಿಸಲಾಗಿತ್ತು. ಬಹುತೇಕ ನೇಕಾರ ಕುಟುಂಬಗಳನ್ನು ಹೊಂದಿರುವ ದೊಡ್ಡಬಳ್ಳಾಪುರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಜತೆಗೆ, ಕೈಗಾರಿಕೆಗಳ ಅವಲಂಬನೆ ಹೆಚ್ಚಿರುವ ನಗರ ಪ್ರದೇಶದಲ್ಲಿ ಸಮೀಕ್ಷೆ ಕುಂಠಿತಗೊಂಡಿದೆ. ಕೆಲವೆಡೆ ತಾಂತ್ರಿಕ ಕಾರಣಗಳಿಂದಾಗಿ ಸಮೀಕ್ಷೆಗೆ ಜನ ಮಾಹಿತಿ ನೀಡಲು ಸಹ ತೊಂದರೆಯಾದ ಉದಾಹರಣೆ ಸಹ ವರದಿಯಾಗಿವೆ. ಹೀಗಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆ ಪ್ರಗತಿ ಕಂಡಿಲ್ಲ ಎಂದು ಸಮೀಕ್ಷೆದಾರರು ‘ಪ್ರಜಾವಾಣಿ’ ಜೊತೆ ಕಾರಣ ಬಿಚ್ಚಿಟ್ಟರು.
1.13 ಲಕ್ಷ ಐ.ಡಿ ಸಮೀಕ್ಷೆಯಿಂದ ಹೊರಗೆ!
ಜಿಲ್ಲೆಯಾದ್ಯಂತ ನಡೆಯುತ್ತಿರುವ ಜಾತಿವಾರು ಗಣತಿಗೆ ಕೆಲ ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ. ಈ ಕುಟುಂಬಗಳಿಂದ ಸಮೀಕ್ಷೆಗೆ ಪಾಲ್ಗೊಳ್ಳದೇ ಹೊರಗುಳಿದ ಕುರಿತು ಪ್ರತ್ಯೇಕ ನಮೂನೆ ಪಡೆಯಲಾಗಿದೆ. ಜತೆಗೆ ಖಾಲಿ ಮನೆ ಕುಟುಂಬಗಳ ವಲಸೆ ಹಾಲಿ ಇತರೆ ವಿಳಾಸದಲ್ಲಿ ಸಮೀಕ್ಷೆಗೊಳಪಟ್ಟವರು ಪಂಪ್‌ಸೆಟ್ ಶೆಡ್ ಸೇರಿ ನಾನಾ ಕಾರಣಗಳಿಂದಾಗಿ ಸಮೀಕ್ಷೆಗೆ ಒಳಪಡದ ಒಟ್ಟು 113063 ಯುಎಚ್‌ಐಡಿ (ಮನೆಸಂಖ್ಯೆ) ಪ್ರತ್ಯೇಕ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಒಟ್ಟು 3334 ಮಂದಿ ನಿಯೋಜನೆಗೊಂಡಿದ್ದರು. ದೊಡ್ಡಬಳ್ಳಾಪುರದಲ್ಲಿ 857 ದೇವನಹಳ್ಳಿ 667 ಹೊಸಕೋಟೆ 1063 ನೆಲಮಂಗಲ 747 ಸಮೀಕ್ಷೆದಾರರು ಪಾಲ್ಗೊಂಡಿದ್ದರು. ಈ ಪೈಕಿ 2300 ಶಿಕ್ಷಕರು ದೀಪಾವಳಿ ಬಳಿಕ ಶಾಲೆಗಳಿಗೆ ಮರಳಿದ ಹಿನ್ನೆಲೆ ಸಮೀಕ್ಷೆಯ ಹೊಣೆಯನ್ನು ಗ್ರಾಮ ಪಂಚಾಯತಿಗಳ ಪಿಡಿಒ ವಿ.ಎ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಮೀಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಬಸವರಾಜು ತಿಳಿಸಿದ್ದಾರೆ.
ಹೊಸಕೋಟೆ ಮೊದಲು
'ರಾಜ್ಯದಲ್ಲಿ ಮಂಡ್ಯ ಚಿಕ್ಕಮಗಳೂರು ಜಿಲ್ಲೆಗಳು ಸಮೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿವೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ತಾಲೂಕು ಸಮೀಕ್ಷೆಯನ್ನು ಶೀಘ್ರಗತಿಯಲ್ಲಿ ಮುಕ್ತಾಯಗೊಳಿಸುತ್ತಿದೆ. ಒಟ್ಟು 1.24ಲಕ್ಷ ಮನೆಗಳ ಗುರಿ ಪೂರ್ಣಗೊಳಿಸಲು 1063 ಸಿಬ್ಬಂದಿ ಗಣತಿದಾರರಾಗಿ ಬೇಕಾಗಿತ್ತು. ಆದರೆ ನಮಗೆ ಲಭ್ಯತೆಯಿದ್ದದ್ದು ಕೇವಲ 530 ಮಂದಿ. ಗ್ರಾ.ಪಂ ಪಿಡಿಒ ವಿ.ಎ ಸೇರಿದಂತೆ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಪ್ರಸ್ತುತ ಶೇ.96.03ರಷ್ಟು ಸಮೀಕ್ಷೆ ಪೂರ್ಣಗೊಳಿಸಿದ್ದೇವೆ' ಎಂದು ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ತಿಳಿಸಿದ್ದಾರೆ.
ಸ್ವಯಂ ಸಮೀಕ್ಷೆಗೆ ಅವಕಾಶ
ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮನೆಗಳು ಸಮೀಕ್ಷೆಗೊಳಪಟ್ಟಿಲ್ಲ. ಒಂದೊಮ್ಮೆ ಮಾಹಿತಿ ನೀಡಲು ಸಿದ್ಧವಿದ್ದೂ ಸಹ ಗಣತಿದಾರರು ಬಂದಿಲ್ಲವೆಂದು ಸಮೀಕ್ಷೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದರೆ ಸರಕಾರದಿಂದ ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ಅವಕಾಶವಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ https://kscbcselfdeclaration.karnataka.gov.in/ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಬೆಂಗಳೂರು ಹೊರತುಪಡಿಸಿ ನಾಗರಿಕ ಎನ್ನುವ ಆಯ್ಕೆಯ ಮೂಲಕ ಸಮೀಕ್ಷೆಗೆ ಪ್ರವೇಶ ಪಡೆಯಬಹುದು. ಆ ನಂತರ ಬೆಸ್ಕಾಂ ನೀಡಿರುವ ಯುಎಚ್‌ಐಡಿ ಆಧಾರ್ ಸಂಖ್ಯೆ ಸೇರಿದಂತೆ ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿ ಸ್ವಯಂ ದೃಢೀಕರಣ ಪತ್ರ ಅಪ್‌ಲೋಡ್ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.