ಆನೇಕಲ್: ತಾಲ್ಲೂಕಿನ ಹೃದಯಭಾಗದಲ್ಲಿರುವ ಚಂದಾಪುರ ಸಂತೆ ಮಾಳವು ಕೆಸರು ಗದ್ದೆಯಾಗಿದ್ದು, ಇಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ಪ್ರತಿನಿತ್ಯ ಹಣ್ಣು ತರಕಾರಿ ಕೊಳ್ಳಲು ಬರುವವ ಗ್ರಾಹಕರು ಕೆಸರಿನಲ್ಲಿ ಜಾರಿ ಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಂದಾಪುರ ಪುರಸಭೆಯ ಮುಂಭಾಗದಲ್ಲಿಯೇ ಸಂತೆ ಮಾಳವಿದ್ದರೂ ಪುರಸಭೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವರ್ತಕರು ಹಾಗೂ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದಾಪುರ ಪುರಸಭೆಯ ಮುಂಭಾಗದಲ್ಲಿರುವ ಸಂತೆ ಮಾಳದಲ್ಲಿ ಪ್ರತಿನಿತ್ಯ ಸಂತೆಯೇ ಯಾವ ಸಮಯದಲ್ಲಿ ಹೋದರೂ ಜನರ ದಂಡೇ ಖರೀದಿಯಲ್ಲಿ ತೊಡಗಿರುತ್ತದೆ. ಆದರೆ ಸೌಲಭ್ಯಗಳ ಕೊರತೆಯಿಂದ ಸಂತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಂತೆಗೆ ಬರುವ ಗ್ರಾಹಕರು, ವರ್ತಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಸಂತೆಯಲ್ಲಿ ಗಬ್ಬು ನಾರುವ ಕಸದ ರಾಶಿ ಒಂದೆಡೆಯಾದರೆ ಕೆಸರುಮಯವಾದ ರಸ್ತೆಯಲ್ಲಿ ಸಂಚರಿಸುವುದು ಮತ್ತೊಂದು ಸಂಕಟ. ಚಂದಾಪುರ ಸಂತೆಯು ಅವ್ಯವಸ್ಥೆಯ ತಾಣವಾಗಿದ್ದು, ಪುರಸಭೆಯು ಸಂತೆಯ ಅಂಗಡಿಗಳಿಂದ ಸುಂಕ ವಸೂಲಿ ಮಾಡಿದರೂ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಚಂದಾಪುರದಲ್ಲಿ ಹೆಚ್ಚಿನ ಜನಸಂಖ್ಯೆಯಿದೆ. ಸುತ್ತಲೂ ಕೈಗಾರಿಕ ಪ್ರದೇಶ ಇರುವುದರಿಂದ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಚಂದಾಪುರದಲ್ಲಿ ಶನಿವಾರ ಸಂತೆಯ ದಿನವಾಗಿದ್ದರೂ ಪ್ರತಿನಿತ್ಯ ಸಂತೆಯಲ್ಲಿ ಜನರಿಂದ ತುಂಬಿರುತ್ತದೆ. ಆದರೆ ಸೌಲಭ್ಯಗಳು ಮಾತ್ರ ಮರಿಚೀಕೆಯಾಗಿದೆ.
ಸಂತೆಯಲ್ಲಿ ಶೆಡ್ ವ್ಯವಸ್ಥೆ ಇಲ್ಲದೇ ಪ್ಲಾಸ್ಟಿಕ್ ಟಾರ್ಪಲ್ ಕಟ್ಟಿಕೊಂಡು ಹಣ್ಣು, ಹೂವು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮಳೆ ಬಂತೆಂದರೆ ಸಂತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ವರ್ತಕರ ವ್ಯಾಪಾರಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕೆಂಬುಂದು ಸ್ಥಳೀಯರ ಒತ್ತಾಯ.
ಮಳೆ ಬಂದರೆ ದುರ್ನಾತ
ಚಂದಾಪುರ ಪುರಸಭೆಯ ಅಧಿಕಾರಿಗಳು ಸಂತೆಯ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಮಳೆ ಬಂದಾಗ ಸಂತೆ ದುರ್ನಾತ ಬೀರುತ್ತದೆ. ಹಾಗಾಗಿ ಚಂದಾಪುರ ಸಂತೆ ಮಾಳವನ್ನು ಅಭಿವೃದ್ಧಿ ಪಡಿಸಬೇಕು. ವರ್ತಕರಿಗೆ ಅನುಕೂಲವಾಗುವಂತೆ ಶೆಡ್ ನಿರ್ಮಿಸಬೇಕು ಎಂದು ಹೂವು ಮಾರುವ ಶಕುಂತಲಮ್ಮ ತಿಳಿಸಿದರು.
ಗಬ್ಬುನಾರುವ ಕೆಸರುಗದ್ದೆಯಾಗಿರುವ ಚಂದಾಪುರ ಸಂತೆಗೆ ಕಾಯಕಲ್ಪ ನೀಡಬೇಕು. ಸುಸಜ್ಜಿತ ವಾಹನ ನಿಲ್ದಾಣ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ಸಂತೆಗೆ ಬರುವ ಜನರ ವ್ಯಾಪಾರ ವಹಿವಾಟಿಗೆ ಉತ್ತಮವಾಗುತ್ತದೆ. ಎಲ್ಲಂದರಲ್ಲಿ ವಾಹನ ನಿಲ್ಲಿಸುವವರ ವಿರುದ್ದ ಕ್ರಮ ವಹಿಸಬೇಕು ಎಂದು ಚಂದಾಪುರದ ಮಹದೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.