ADVERTISEMENT

ಅಪೌಷ್ಟಿಕ ಮಕ್ಕಳಿಗೆ ಏಕಿಲ್ಲ ಚಿಕಿತ್ಸೆ: ಮಕ್ಕಳ ಆಯೋಗದ ಸದಸ್ಯರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 1:56 IST
Last Updated 31 ಆಗಸ್ಟ್ 2025, 1:56 IST
ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್‌ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ, ಶಶಿಧರ್‌ ಕೋಸಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್‌ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ, ಶಶಿಧರ್‌ ಕೋಸಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ:  ತಾಲ್ಲೂಕಿನ ಸಾರ್ವಜನಿಕ ತಾಯಿ ಮಗು ಆಸ್ಪತ್ರೆ, ಸರ್ಕಾರಿ ಶಾಲೆ, ಗ್ರಾಮ ಪಂಚಾಯಿತಿ, ಮಹಿಳಾ ಪೊಲೀಸ್‌ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ.ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ, ಶಶಿಧರ್‌ ಕೋಸಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಆಯೋಗದ ಸದಸ್ಯರು ಅಪೌಷ್ಟಿಕ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ವಾರ್ಡ್‌ನಲ್ಲಿ ಒಬ್ಬರು ಕೂಡ ಅಪೌಷ್ಟಿಕ ಮಕ್ಕಳು ಇರಲಿಲ್ಲ. ಜಿಲ್ಲೆಯಲ್ಲಿ 45 ಅಪೌಷ್ಟಿಕ ಮಕ್ಕಳಿದ್ದರೂ ಕೂಡ ಯಾವ ಮಕ್ಕಳಿಗೂ ಏಕೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಲ್ಲಿನ ಅಪೌಷ್ಟಿಕ ಮಕ್ಕಳ ಅಡುಗೆ ಮನೆಯ ಸೌಲಭ್ಯವೇ ಸಮರ್ಪಕವಾಗಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಸೂಚಿಸಿದರು.

ADVERTISEMENT

ಆಸ್ಪತ್ರೆಯಲ್ಲಿ ಪಥ್ಯ ಆಹಾರ ನೀಡದ ಬಗ್ಗೆ ಕೂಡ ಗಮನಿಸಿದ ಆಯೋಗದ ಸದಸ್ಯರು ಇಂದೇ ಅದರ ಬಗ್ಗೆ ಕ್ರಮ ವಹಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ತಾಯಿ ಕಾರ್ಡ್ ನೀಡುವಾಗಲೇ ವಯಸ್ಸಿನ ದಾಖಲಾತಿಗಳಾದ ಶಾಲಾ ದಾಖಲಾತಿ, ಜನನ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಪರಿಶೀಲಿಸಬೇಕು. ಜತೆಗೆ ಸಖಿ ಒನ್‌ ಸೆಂಟರ್‌ ನಲ್ಲಿರುವ ಶಿಶು ಪಾಲನ ಕೇಂದ್ರವನ್ನು ಕೂಡಲೇ ಸ್ಥಳಾಂತರಿಸಲು ಸೂಚನೆ ನೀಡಿದರು.

ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಶಾಲೆ, ಆಸ್ಪತ್ರೆ, ಪೊಲೀಸ್‌ ಠಾಣೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಕ್ಕಳ ಆಯೋಗದ ಸದಸ್ಯರು ಸೂಚನೆ ನೀಡಿದರು.

ದೊಡ್ಡಬೆಳವಂಗಲ ಕೆಪಿಎಸ್‌ ಶಾಲೆಗೆ ಭೇಟಿ ನೀಡಿದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಶಾಲೆಯಲ್ಲಿ ಹೆಚ್ಚು ದಿನಗಳ ಕಾಲಗಳ ರಜೆ ಹಾಕಿದ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು ಎಂದು ಸೂಚಿಸಿದರು. ಜತೆಗೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲು ಸೂಚನೆ ನೀಡಿದರು.

ತಾಲ್ಲೂಕಿನ ಮಾದಗೊಂಡನಹಳ್ಳಿಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ ಕಾಮಗಾರಿ ಪೂರ್ಣಗೊಂಡಿದ್ದರು ಕೂಡ ಮಕ್ಕಳ ಬಳಕೆಗೆ ನೀಡಿಲ್ಲ. ಇದರ ಬಗ್ಗೆ ತಾಲ್ಲೂಕು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. 15 ದಿನದೊಳಗೆ ಈ ಬಗ್ಗೆ ಕ್ರಮವಹಿಸಲು ಸೂಚನೆ ನೀಡಿದರು.

ಬಿಸಿಯೂಟ ಬೆಳೆ ಸರಿ ಇಲ್ಲ:

ತಾಲ್ಲೂಕಿನ ಕೊಡಿಗೇಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಬೇಳೆಯನ್ನು ಪರಿಶೀಲಿಸಿದ ವೇಳೆಯಲ್ಲಿ ಬೇಳೆಯ ಗುಣಮಟ್ಟ ಸರಿಯಿಲ್ಲ ಎಂಬ ಬಗ್ಗೆ ಗರಂ ಆದರು. ಗುಣಮಟ್ಟದ ಬೇಳೆ ಪೂರೈಸಲು ಇಲಾಖೆಗೆ ಸೂಚನೆ ನೀಡಿದರು.

ಮಕ್ಕಳ ಸ್ನೇಹಿಯಾಗಿರಲಿ:

ಮಹಿಳಾ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಅಧಿಕಾರಿಗಳು ಮಹಿಳಾ ಪೊಲೀಸ್‌ ಠಾಣಾ ಜನಸ್ನೇಹಿಯಾಗಿದೆಯಾದರೂ ಮಕ್ಕಳ ಸ್ನೇಹಿಯಾಗಿಲ್ಲವೆಂದ ಅವರು ಸೂಕ್ತ ಮಾರ್ಪಾಡು ಮಾಡುವಂತೆ ಸಲಹೆ ನೀಡಿದರು. ಆಯೋಗದ ಸಲಹೆಯ ಬೆನ್ನಲ್ಲೇ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್‌ ಅವರು ಕೆಲವೇ ಕ್ಷಣಗಳಲ್ಲಿ ಮಕ್ಕಳ ಸ್ನೇಹಿಯನ್ನಾಗಿಸಲು ಆಟಿಕೆಗಳು ವಿವಿಧ ಫಲಕಗಳನ್ನು ಅಳವಡಿಸಿ ವಾಟ್ಸ್‌ಆ್ಯಪ್‌ ಮೂಲಕ ಬದಲಾವಣೆಯನ್ನು ಆಯೋಗದ ಸದಸ್ಯರಿಗೆ ತಿಳಿಸಿದರು. ಮಹಿಳಾ ಪೊಲೀಸ್‌ ಠಾಣೆಯ ಕ್ರಿಯಾಶೀಲತೆ ಗಮನಿಸಿದ ಅಧಿಕಾರಿಗಳು ರಾಜ್ಯದ ಇತರೆ ಮಹಿಳಾ ಪೊಲೀಸ್‌ ಠಾಣೆಗಳಲ್ಲಿ ಇದೇ ಮಾದರಿ ಅನುಸರಿಸುವಂತೆ ಸೂಚನೆ ನೀಡುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.