
ಆನೇಕಲ್: ತಾಲ್ಲೂಕಿನ ಬಳ್ಳೂರು ಕೆರೆಯಲ್ಲಿ ಶನಿವಾರ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಳ್ಳೂರಿನಲ್ಲಿ ನೆಲೆಸಿರುವ ಬಿಹಾರ ಮತ್ತು ಆಂಧ್ರಪ್ರದೇಶದ ಕೂಲಿ ಕಾರ್ಮಿಕರ ಮಕ್ಕಳಾದ ಅನೀಕೇತ್ ಕುಮಾರ್ (8) ಹಾಗೂ ಕದ್ರಿಯ ರೆಹಮತ್ ಬಾಬಾ(11) ಮೃತರು.
ಮನೆಯ ಬಳಿ ಶನಿವಾರ ಸಂಜೆ ಆಟವಾಡುತ್ತಿದ್ದ ಇಬ್ಬರೂ ನಂತರ ಕೆರೆ ಬಳಿ ತೆರಳಿ ನೀರಿಗೆ ಇಳಿದ್ದಾರೆ. ಮಕ್ಕಳು ರಾತ್ರಿಯಾದರೂ ಮನೆಗೆ ಬಾರದ ಕಾರಣ ಪೋಷಕರು ಹುಡಕಾಟ ನಡೆಸಿದ್ದಾರೆ. ಮಕ್ಕಳು ಪತ್ತೆಯಾಗದ ಕಾರಣ ಕೊನೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಬಳ್ಳೂರು ಕೆರೆಯಲ್ಲಿ ಭಾನುವಾರ ಬೆಳಗ್ಗೆ ಬಾಲಕರ ಶವಗಳು ತೇಲುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈಜು ತಜ್ಞರನ್ನು ಕರೆಸಿ ಶವಗಳನ್ನು ಹೊರಗೆ ತೆಗೆಸಿದರು. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.