ADVERTISEMENT

ದೊಡ್ಡಬಳ್ಳಾಪುರದಲ್ಲೂ ಬೂದು ಮಂಗಟ್ಟೆ

ಏಕಾಶಿಪುರ, ಗಂಡ್ರಗೊಳ್ಳಿಪುರ ಅರಣ್ಯ, ಎಸ್‌.ಎಂ.ಗೊಲ್ಲಹಳ್ಳಿ ಸುತ್ತಮುತ್ತ ಕಾಮನ್‌ ಗ್ರೇ ಹಾರನ್‌ಬಿಲ್‌ ಸಂತತಿ ವೃದ್ಧಿ

ನಟರಾಜ ನಾಗಸಂದ್ರ
Published 12 ನವೆಂಬರ್ 2020, 6:37 IST
Last Updated 12 ನವೆಂಬರ್ 2020, 6:37 IST
ಗಂಡ್ರಗೊಳ್ಳಿಪುರ ಅರಣ್ಯದಲ್ಲಿ ಕಂಡ ಬೂದು ಮಂಗಟೆ  ಚಿತ್ರಗಳು ಚಿದಾನಂದ್‌
ಗಂಡ್ರಗೊಳ್ಳಿಪುರ ಅರಣ್ಯದಲ್ಲಿ ಕಂಡ ಬೂದು ಮಂಗಟೆ  ಚಿತ್ರಗಳು ಚಿದಾನಂದ್‌   

ದೊಡ್ಡಬಳ್ಳಾಪುರ: ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಕಾಡುಗಳ ನಡುವೆ ವಾಸಮಾಡುವ ಬೂದು ಮಂಗಟ್ಟೆ (ಕಾಮನ್ ಗ್ರೇ ಹಾರನ್ ಬಿಲ್) ಪಕ್ಷಿಗಳು ಈಗ ತಾಲ್ಲೂಕಿನ ಏಕಾಶಿಪುರ, ಗಂಡ್ರಗೊಳ್ಳಿಪುರ
ಅರಣ್ಯ ಪ್ರದೇಶ, ಎಸ್‌.ಎಂ.ಗೊಲ್ಲಹಳ್ಳಿ ಗ್ರಾಮದ ಸುತ್ತಮುತ್ತಲಿನ ಬೃಹತ್‌ ಆಲದ ಮರಗಳಲ್ಲಿ ಕಂಡು ಬಂದಿದ್ದು ಪಕ್ಷಿ ಪ್ರಿಯರಲ್ಲಿ ಸಂತಸವನ್ನು ಮೂಡಿಸಿದೆ.

‘ಮಂಗಟ್ಟೆ ಪಕ್ಷಿಗಳ ಬಗ್ಗೆ ಸುಳಿವು ದೊರೆಯುತ್ತಿದ್ದಂತೆ ಸತತ ಸುತ್ತಾಟದ ನಂತರ ಮಂಗಟ್ಟೆ ಪಕ್ಷಿಗಳ ಪರಿವಾರ ಕಣ್ಣಿಗೆ ಕಂಡಿದ್ದೆ ತಡ ತಕ್ಷಣ ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆ’ ಎಂದು ಮಾಹಿತಿ ನೀಡಿದ ಯುವ ಸಂಚಲ ತಂಡದ ಅಧ್ಯಕ್ಷ ಚಿದಾನಂದ್‌, ‘ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ, ಕಾಳಿ ನದಿ ಪ್ರದೇಶದಲ್ಲಿ ಸುತ್ತಾಡಿದಾಗ ವಿವಿಧ ಬಣ್ಣದ ಮಂಗಟ್ಟೆ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡಿದ್ದವು’ ಎಂದರು.

‘ಮಂಗಟ್ಟೆಯ ಗಾತ್ರ, ಕಂದು ಬಣ್ಣ, ದೊಡ್ಡ ಕೊಕ್ಕು, ಕೊಕ್ಕಿನ ಮೇಲೊಂದು ಕೊಂಬು, ಉದ್ದವಾದ ಬಾಲದ ಪಕ್ಕಗಳ ಬದಿಯಲ್ಲಿ ಬಿಳಿ ಮಚ್ಚೆಯ ಸೂಕ್ಷ್ಮ ಗಮನಿಸುವಿಕೆ ಮುಂತಾದವರು ಇದರ ಅಂದವನ್ನು ಹೆಚ್ಚಿಸಿದೆ. ಇಂತಹ ಸುಂದರ ಪಕ್ಷಿಯನ್ನು ನಮ್ಮ ಬಯಲುಸೀಮೆಯ ತಾಲ್ಲೂಕಿನಲ್ಲೂ ಕಂಡು ಆಶ್ಚರ್ಯವಾಗಿದೆ’ ಎಂದರು ದೊಡ್ಡಬಳ್ಳಾಪುರದ ಪಕ್ಷಿ ಪ್ರಿಯ ಕೆ.ಎನ್‌.ಮೋಹನ್‌ಕುಮಾರ್‌.

ADVERTISEMENT

‘ಗಂಡ್ರಗೊಳ್ಳಿಪುರ ಅರಣ್ಯದಲ್ಲಿ ಪಕ್ಷಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಫೋಟೊಗೆ ಪೋಸ್ ಕೊಡಲು ಎರಡು ಮಂಗಟ್ಟೆ ಪಕ್ಷಿಗಳು ತಪ್ಪಿಸಿಕೊಂಡಿದ್ದವು. ಈಗ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು ಆರು ಪಕ್ಷಿಗಳನ್ನು ಒಳಗೊಂಡ ಗುಂಪು ಮಾಡಿಕೊಂಡಿದೆ. ಇತ್ತೀಚಗಷ್ಟೇ ಪಕ್ಷಿ ವೀಕ್ಷಣೆ ಸಮಯದಲ್ಲಿ ಕುಟುಂಬ ಸಮೇತರಾಗಿ ಎಲ್ಲಾ ಆರು ಪಕ್ಷಿಗಳು ಫೋಟೊದಲ್ಲಿ ಸೆರೆಯಾಗಿವೆ. ನಮ್ಮ ತಾಲ್ಲೂಕಿನಲ್ಲಿ ಮಂಗಟ್ಟೆಗಳು ವಾಸ ಮಾಡುವಂತಾಗಬೇಕು ಎನ್ನುವ ನಮ್ಮ ಬಹುದಿನಗಳ ಆಸೆಯನ್ನು ಈ ಪಕ್ಷಿಗಳು ಪೂರೈಸಿವೆ. ಮುಂದಿನ ದಿನಗಳಲ್ಲಿ ಇವುಗಳ ಇರುವಿಕೆಗೆ ಅಗತ್ಯ ಇರುವವೈವಿಧ್ಯಮಯ ಸಸ್ಯರಾಶಿ, ಜೀವರಾಶಿ ಇರುವಂತೆ ಎಲ್ಲಾ ಪಕ್ಷಿ, ಪ್ರಾಣಿ ಪ್ರಿಯರು ಕೆಲಸ ಮಾಡಬೇಕಿದೆ’ ಎಂದು ಮೋಹನ್‌ಕುಮಾರ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.