ADVERTISEMENT

ಕಾಂಗ್ರೆಸ್, ಜೆಡಿಎಸ್ ಒಗ್ಗೂಡಿ ಪ್ರಚಾರ

ದೇವನಹಳ್ಳಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 16:11 IST
Last Updated 27 ಮಾರ್ಚ್ 2019, 16:11 IST
   

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಎಂ. ವೀರಪ್ಪ ಮೊಯಿಲಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮನ್ವಯತೆಯಿಂದ ಚುನಾವಣಾ ಪ್ರಚಾರ ನಡೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್ ಹೇಳಿದರು.

ಇಲ್ಲಿನ ಶ್ರೀಕೃಷ್ಣ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಚುನಾವಣಾ ಪ್ರಚಾರ ಕುರಿತು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಹೈಕಮಾಂಡ್ ನಿರ್ಧಾರವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಯಾವುದೆ ಭಿನ್ನಮತವಿಲ್ಲ, ಸ್ಥಳೀಯ ಜೆಡಿಎಸ್ ಶಾಸಕರನ್ನು ಮತ್ತು ಆ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನಮ್ಮ ಕರ್ತವ್ಯ’ ಎಂದರು.

ADVERTISEMENT

ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕೆಲವು ಕಡೆ ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದಿಲ್ಲ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ಬಯಲು ಸೀಮೆ ಪ್ರದೇಶಕ್ಕೆ ಸಂಸದ ಎಂ. ವೀರಪ್ಪ ಮೊಯಿಲಿ ನೀಡಿರುವ ಕೊಡುಗೆ ಐತಿಹಾಸಿಕವಾದುದು ಎಂದರು. ಕೆರೆಗಳಿಗೆ ನೀರು ಹರಿದು ಬರುವುದು ವಿಳಂಬವಾದರೂ ದೂರದೃಷ್ಟಿ ಯೋಜನೆ ಸಾಕಾರಗೊಳ್ಳಲಿದೆ ಎಂಬುದು ಸತ್ಯ ಎಂದರು.

ಬೈಯಾಪ ಮಾಜಿ ಸದಸ್ಯ ಶ್ರೀರಾಮಯ್ಯ ಮಾತನಾಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಾರುತಿ, ಜಿಲ್ಲಾ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ನಾಗೇಶ್, ಖಾದಿ ಮಂಡಳಿಯ ತಾಲ್ಲೂಕು ಘಟಕ ಮಾಜಿ ಅಧ್ಯಕ್ಷ ಕೆ. ಪಟಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.