ADVERTISEMENT

ಜೆಡಿಎಸ್ ಮುಖಂಡರನ್ನು ನಂಬಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸೋಲು: ವೀರಪ್ಪಮೊಯ್ಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 6:51 IST
Last Updated 14 ಜೂನ್ 2022, 6:51 IST
ಬೆಸೆಂಟ್ ಪಾರ್ಕ್‌ನಲ್ಲಿ ಮಂಗಳವಾರ "ನವ ಚಿಂತನ" ಶಿಬಿರಕ್ಕೆ ಚಾಲನೆ ನೀಡಿದ ಎಂ.ವೀರಪ್ಪಮೊಯ್ಲಿ
ಬೆಸೆಂಟ್ ಪಾರ್ಕ್‌ನಲ್ಲಿ ಮಂಗಳವಾರ "ನವ ಚಿಂತನ" ಶಿಬಿರಕ್ಕೆ ಚಾಲನೆ ನೀಡಿದ ಎಂ.ವೀರಪ್ಪಮೊಯ್ಲಿ   

ದೊಡ್ಡಬಳ್ಳಾಪುರ: ನನ್ನ ರಾಜಕೀಯ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು, 2018ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಬೆಂಬಲ ನೀಡುವಂತೆ ಕೇಳಿದ್ದು. ಇವರೊಂದಿಗಿನ ಹೊಂದಾಣಿಕೆಯಿಂದಾಗಿಯೇ ನಾನು ಸೋಲುವ ಜೊತೆಗೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪಮೊಯ್ಲಿ ಹೇಳಿದರು.

ಅವರು ನಗರದ ಬೆಸೆಂಟ್ ಪಾರ್ಕ್‌ನಲ್ಲಿ ಮಂಗಳವಾರ ಪ್ರಾರಂಭವಾದ "ನವ ಚಿಂತನ" ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇವೇಗೌಡರು ದ್ವೇಷದ ರಾಜಕಾರಣ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಿದ ಪಕ್ಷದ ಮುಂಖಡರ ಮೇಲೆಯೇ ದೂರುಗಳನ್ನು ದಾಖಲಿಸಲು ಆರಂಭಿಸಿದರು. ಇದರಿಂದಾಗಿಯೇ ಪ್ರಧಾನ ಮಂತ್ರಿ ಪಟ್ಟ ಕಳೆದುಕೊಂಡಿದ್ದು. ನಮ್ಮ ವಿರೋಧಿಗಳ ವಿರುದ್ದ ದೂರು ದಾಖಲಿಸುವ ಪ್ರವೃತ್ತಿಯನ್ನು ಇಂದಿಗೂ ದೇವೇಗೌಡರು ಬಿಟ್ಟಿಲ್ಲ. ಜೆಡಿಎಸ್ ನಂಬಿಯೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸೋಲು ಕಾಣಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ಬಿಜೆಪಿಯಷ್ಟೇ ಮುಖ್ಯವಾಗಿ ಜೆಡಿಎಸ್ ಅನ್ನು ಸಹ ವಿರೋಧಿಸಬೇಕು. ತಂದೆ ಮಕ್ಕಳು ಇಬ್ಬರು ನಂಬಿಕೆಗೆ ಅರ್ಹರಲ್ಲ ಎಂದು ದೂರಿದರು.

ADVERTISEMENT

ನ್ಯಾಷನಲ್ ಹೆರಾಲ್ಡ್ ಹಗರಣವನ್ನು ಬಿಜೆಪಿಯವರು ಸೃಷ್ಟಿ ಮಾಡಿರುವ ಆರೋಪವಾಗಿದೆ. ಇದರಿಂದ ಸೋನಿಯಗಾಂಧಿ, ರಾಹುಲ್ ಗಾಂಧಿ ದೋಷಮುಕ್ತರಾಗುತ್ತಾರೆ. ದ್ವೇಷದ ರಾಜಕಾರಣದ ಭಾಗವಾಗಿಯಷ್ಟೇ ದೂರು ದಾಖಲಿಸಲಾಗಿದೆ. ಆಧಾರ ರಹಿತವಾದ ದೂರುಗಳಿಗೆ ನ್ಯಾಯಾಲಯದಲ್ಲಿ ಸೋಲು ಖಚಿತ ಎಂದರು.

ಬಿಜೆಪಿ ಮುಖಂಡರು ಒಂದು ವರ್ಗದ ಜನರನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ದೇಶದ ಕಾನೂನು, ಪೊಲೀಸ್ ವ್ಯವಸ್ಥೆ ಬಗ್ಗೆ ಬಿಜೆಪಿಗೆ ಗೌರವ ಇಲ್ಲದಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಶಾಸಕ ಟಿ.ವೆಂಕಟರಮಣಯ್ಯ, ಶರತ್ ಬಚ್ಚೇಗೌಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿಸಂತೆ ಜಿಲ್ಲೆಯ ಮುಖಂಡರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.