ADVERTISEMENT

ಮುನಿಯಪ್ಪಗೆ ಟಿಕೆಟ್‌: ಬಂಡಾಯ ಸಭೆ

ದೇವನಹಳ್ಳಿಯಲ್ಲಿ ಮೂಲ ಕಾಂಗ್ರೆಸ್ಸಿಗರು, ಟಿಕೆಟ್‌ ಆಕಾಂಕ್ಷಿಗಳ ಗೋಪ್ಯ ಸಭೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 6:54 IST
Last Updated 1 ಏಪ್ರಿಲ್ 2023, 6:54 IST
ದೇವನಹಳ್ಳಿ ಖಾದಿ ಬೋರ್ಡ್‌ ಕಚೇರಿಯಲ್ಲಿ ಗೋಪ್ಯ ಸಭೆ ನಡೆಸಿದ ಬಂಡಾಯ ಕಾಂಗ್ರೆಸಿಗರು (ಎಡಚಿತ್ರ), ದೇವನಹಳ್ಳಿಯ ಮಾಜಿ ಶಾಸಕ ವೆಂಕಟಸ್ವಾಮಿ ಅವರ ಸಾದಹಳ್ಳಿ ನಿವಾಸಕ್ಕೆ ಭೇಟಿ ನೀಡಿದ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ
ದೇವನಹಳ್ಳಿ ಖಾದಿ ಬೋರ್ಡ್‌ ಕಚೇರಿಯಲ್ಲಿ ಗೋಪ್ಯ ಸಭೆ ನಡೆಸಿದ ಬಂಡಾಯ ಕಾಂಗ್ರೆಸಿಗರು (ಎಡಚಿತ್ರ), ದೇವನಹಳ್ಳಿಯ ಮಾಜಿ ಶಾಸಕ ವೆಂಕಟಸ್ವಾಮಿ ಅವರ ಸಾದಹಳ್ಳಿ ನಿವಾಸಕ್ಕೆ ಭೇಟಿ ನೀಡಿದ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ   

ದೇವನಹಳ್ಳಿ: ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ದೇವನಹಳ್ಳಿ ಪರಿಶಿಷ್ಟ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಿರುವುದರ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಹಾಗೂ ಟಿಕೆಟ್‌ ಆಕಾಂಕ್ಷಿಗಳು ಪಟ್ಟಣದ ಖಾದಿ ಬೋರ್ಡ್‌ ಕಚೇರಿಯಲ್ಲಿ ಶುಕ್ರವಾರ ಗೋಪ್ಯ ಸಭೆ ನಡೆಸಿದರು.

ಐದು ವರ್ಷಗಳಿಂದ ಕ್ಷೇತ್ರದಲ್ಲಿ ಎಲ್ಲ ಆಕಾಂಕ್ಷಿಗಳು ಸಾಕಷ್ಟು ಜನಪರ ಕೆಲಸ ಮಾಡಿಕೊಂಡು, ಪಕ್ಷ ಸಂಘಟನೆ ಮಾಡಿತ್ತಿದ್ದಾರೆ. ಕಾಂಗ್ರೆಸ್ ಪರ ಜನಾಭಿಪ್ರಾಯ ರೂಪಿಸಲು ಶ್ರಮಿಸಿದ್ದೇವೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಕೆ.ಎಚ್‌.ಮುನಿಯಪ್ಪರಿಗೆ ಟಿಕೆಟ್‌ ಘೋಷಿಸಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಸಭೆಯಲ್ಲಿ ಜಮಾವಣೆಗೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಕೆ.ಎಚ್‌.ಮುನಿಯಪ್ಪ ಅವರಿಗೆ ಬೆಂಬಲ ನೀಡುವ ಬದಲು, ಸ್ಥಳೀಯ ಆಕಾಂಕ್ಷಿ ಒಬ್ಬರಿಗೆ ಅವಕಾಶ ಮಾಡಿಕೊಡಬೇಕು. ದೇವನಹಳ್ಳಿ ಹೊರತಾಗಿ ಬೇರೆಡೆ ಕೆ.ಎಚ್‌.ಮುನಿಯಪ್ಪ ಸ್ಪರ್ಧೆ ಮಾಡಲಿ ಎಂಬ ಚರ್ಚೆಯನ್ನು ತಾಸುಗಟ್ಟಲೇ ನಡೆಸಿದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ‘ನನ್ನನ್ನು ಸೇರಿದಂತೆ ಪಕ್ಷದಲ್ಲಿ ಸಾಕಷ್ಟು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಸತತ 3-4 ವರ್ಷ ಪಕ್ಷವನ್ನು ಬಲಿಷ್ಠಗೊಳ್ಳಿಸಲು ಸಾಕಷ್ಟು ಶ್ರಮ ವ್ಯಯಿಸಲಾಗಿದೆ. ರಾಷ್ಟ್ರೀಯ ನಾಯಕ ಕೆ.ಎಚ್‌.ಮುನಿಯಪ್ಪ ಅವರಿಗೆ ಹೈಕಮಾಂಡ್ ಟಿಕೆಟ್‌ ನೀಡಿ ಗೊಂದಲಕ್ಕೆ ಕಾರಣವಾಗಿದೆ. ಹಿರಿಯ ರಾಜಕೀಯ ನಾಯಕರಿಗೆ ಪಕ್ಷಕ್ಕಾಗಿ ದುಡಿಯುತ್ತಿರುವ ಸ್ಥಳೀಯರಿಗೆ ಟಿಕೆಟ್‌ ಬಿಟ್ಟುಕೊಡುವಂತೆ ಮನವಿ ಮಾಡಿಕೊಳ್ಳುತ್ತೇನೆ' ಎಂದರು.

10 ವರ್ಷದಿಂದ ಕಾಂಗ್ರೆಸ್‌ ಶಾಸಕರಿಲ್ಲದೇ ಕ್ಷೇತ್ರವು ನಲುಗಿದೆ. ಪಕ್ಷದ ಬಲವರ್ಧನೆಗಾಗಿ ದುಡಿದ ಒಬ್ಬರಿಗೆ ಟಿಕೆಟ್‌ ಬಿಟ್ಟುಕೊಡುವಂತೆ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಈ ಮನವಿಯನ್ನು ಎಲ್ಲರೂ ಒಂದಾಗಿ ಅವರಿಗೆ ಮನವರಿಗೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.

‘ನಾನು 20 ವರ್ಷದಿಂದ ಪಕ್ಷಕ್ಕೆ ದುಡಿದಿದ್ದೇನೆ. ತಾಲ್ಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠಗೊಳ್ಳಿಸಲು ಎಲ್ಲರೂ ಒಂದಾಗಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ. ರಾಷ್ಟ್ರೀಯ ನಾಯಕರು ಟಿಕೆಟ್‌ ಬಿಟ್ಟುಕೊಟ್ಟು ಕಾರ್ಯಕರ್ತರ ಬೆಳವಣಿಗೆಗೆ ಸಹಕಾರಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತ ಕುಮಾರ್‌ ತಿಳಿಸಿದರು.

ಮುಖಂಡರಾದ ಚೌಡಪನಹಳ್ಳಿ ಲೋಕೇಶ್, ಚಿನ್ನಪ್ಪ ಸೇರಿದಂತೆ ತಾಲ್ಲೂಕಿನ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.