ADVERTISEMENT

ಗ್ರಾಹಕ ಹಕ್ಕುಗಳ ಜಾಗೃತಿ ಅಗತ್ಯ

ಜಿಲ್ಲಾ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕ ಎಂ.ಸಿ.ನರಸಿಂಹಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 12:27 IST
Last Updated 2 ಮಾರ್ಚ್ 2020, 12:27 IST
ವಿಜಯಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಅಭಿಯಾನ ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದರು
ವಿಜಯಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಅಭಿಯಾನ ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದರು   

ವಿಜಯಪುರ: ಗ್ರಾಹಕ ಸೇವೆಗಳು, ಹಕ್ಕುಗಳು ಮತ್ತು ಕಾನೂನಿನ ಕುರಿತು ಗ್ರಾಹಕರಿಗೆ ಸೂಕ್ತ ಅರಿವು ಮೂಡಿಸಿದಲ್ಲಿ ಸೇವೆಯಲ್ಲಾಗುತ್ತಿರುವ ವಂಚನೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕ ಎಂ.ಸಿ.ನರಸಿಂಹಮೂರ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಹಕ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಿವು, ಮಾಹಿತಿ ಕೊರತೆಯಿಂದಾಗಿ ಗ್ರಾಹಕರು ಮೋಸ ಹೋಗುತ್ತಿರುತ್ತಾರೆ. ಇವರಲ್ಲಿ ಜಾಗೃತಿ ಮೂಡಿಸಿದಾಗ ಇಂಥ ವಂಚನೆಯ ಪ್ರವೃತ್ತಿಗೆ ತಡೆಯೊಡ್ಡಬಹುದು. ಜಾಗೃತ ಗ್ರಾಹಕರು ನಮ್ಮ ದೇಶದ ಆಸ್ತಿ ಇದ್ದಂತೆ ಎಂಬುದನ್ನು ಮರೆಯಬಾರದು. ಇವರಿಂದಾಗಿಯೇ ವ್ಯವಸ್ಥೆ ನೈತಿಕವಾಗಿರಲು ಸಾಧ್ಯ ಎಂದು ಹೇಳಿದರು.

ADVERTISEMENT

ಗ್ರಾಹಕರು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ಲೋಪವಿದ್ದಲ್ಲಿ ಸಂಬಂಧಿಸಿದ ಕಂಪೆನಿಗಳ ವಿರುದ್ಧ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಖರೀದಿಸಿದ ಬಗ್ಗೆ ಬಿಲ್ ಕಡ್ಡಾಯವಾಗಿ ಪಡೆದಿರಬೇಕು ಎಂದು ವಿವರಿಸಿದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಬಿಜ್ಜವಾರ ಸುಬ್ರಮಣಿ ಮಾತನಾಡಿ, ಉಚಿತವಾಗಿ ಪಡೆದ ವಸ್ತುಗಳಲ್ಲಿ ಲೋಪವಿದ್ದಲ್ಲಿ, ಗ್ರಾಹಕರಿಗೆ ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ. ಆದರೆ, ಹಣ ಪಾವತಿಸಿ ಪಡೆದ ವಸ್ತುವಿನಲ್ಲಿ ಲೋಪವಿದ್ದಲ್ಲಿ ಅದನ್ನು ಪ್ರಶ್ನಿಸುವ ಮತ್ತು ನ್ಯಾಯಬದ್ಧ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗೆ ಇರುತ್ತದೆ. ಆದ್ದರಿಂದ ಯಾವುದೇ ಸ್ವರೂಪದ ಅಮಿಷದ ಪ್ರಕಟಣೆಗಳಿಗೆ ಮಾರು ಹೋಗಬಾರದು ಎಂದು ಎಚ್ಚರಿಸಿದರು.

ಉಪಾಧ್ಯಕ್ಷೆ ಕೃಷ್ಣವೇಣಿ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಜಾತಮ್ಮ ಮತ್ತಿತರರು ಇದ್ದರು.

‘ವಕೀಲರು ಬೇಕಿಲ್ಲ‘:ಎಲ್ಲ‌ ಹಂತಗಳಲ್ಲೂ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯಗಳಿವೆ. ಗ್ರಾಹಕ ನ್ಯಾಯಾಲಯಗಳಿಂದ ನ್ಯಾಯ ಪಡೆಯಲು ವಕೀಲರು ಬೇಕಿಲ್ಲ. ದುಬಾರಿ ಶುಲ್ಕ ಪಾವತಿಸುವಂತಿಲ್ಲ. ಸರಳವಾಗಿ, ಕಡಿಮೆ ಅವಧಿಯಲ್ಲಿ ವ್ಯಾಜ್ಯವನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದುಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಬಿಜ್ಜವಾರ ಸುಬ್ರಮಣಿ ಮಾಹಿತಿ ನೀಡಿದರು.

ಗ್ರಾಹಕರ ಹಕ್ಕುಗಳ ಕುರಿತು ಶಾಲಾ, ಕಾಲೇಜುಗಳು, ಸಮುದಾಯ ಸಂಘಟನೆಗಳುಜಾಗೃತಿ ಮೂಡಿಸಬೇಕು. ಅವರಲ್ಲಿ ಅರಿವು ಮೂಡಿಸಿವುದರಿಂದ ಎಲ್ಲ ನಾಗರಿಕರನ್ನು ತಲುಪಲುಸಾಧ್ಯ. ವಿದ್ಯಾರ್ಥಿಗಳು ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.