ADVERTISEMENT

ದೊಡ್ಡಬಳ್ಳಾಪುರ: ಮೊಳಕೆಯೊಡೆಯದ ಮುಸುಕಿನಜೋಳ

ನೇರಳೆಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 5:31 IST
Last Updated 1 ಜುಲೈ 2020, 5:31 IST
ನೇರಳೆಘಟ್ಟ ಗ್ರಾಮದಲ್ಲಿ ಸಿಪಿ-818 ಜೋಳದ ಬೀಜ ನಾಟಿ ಮಾಡಿದ್ದ ರೈತರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿ ರೂಪ ಭೇಟಿ ನೀಡಿ ಪರಿಶೀಲನೆ ನಡೆಸಿದರು
ನೇರಳೆಘಟ್ಟ ಗ್ರಾಮದಲ್ಲಿ ಸಿಪಿ-818 ಜೋಳದ ಬೀಜ ನಾಟಿ ಮಾಡಿದ್ದ ರೈತರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿ ರೂಪ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ:‘ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿದ್ದ ಖಾಸಗಿ ಕಂಪನಿಯೊಂದರ ಸಿಪಿ-818 ತಳಿಯ ಮುಸುಕಿನಜೋಳ ಕಳಪೆಯಾಗಿದ್ದು ಸರಿಯಾಗಿ ಮೊಳಕೆಯೊಡೆದಿಲ್ಲ’ ಎಂದು ಆರೋಪಿಸಿ ಮಂಗಳವಾರ ನೇರಳೆಘಟ್ಟ ಗ್ರಾಮದಲ್ಲಿ ರೈತರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ದೂರುಗಳು ಕೇಳಿ ಬಂದ ತಕ್ಷಣ ಎಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು ಸಿಪಿ-818 ತಳಿಯ ಮುಸುಕಿನಜೋಳ ಬಿತ್ತನೆ ಬೀಜದ ಮಾರಾಟವನ್ನು ಮಂಗಳವಾರ ಬೆಳಿಗ್ಗೆಯಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸಿಪಿ-818 ತಳಿಯ ಜೋಳ ಬಿತ್ತನೆ ಮಾಡುವಂತೆ ಕಂಪನಿ ವತಿಯಿಂದ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತ, ಬಿತ್ತನೆ ಬೀಜದ ಕುರಿತು ಮಾಹಿತಿ ನೀಡುತ್ತಿದ್ದ ಕಂಪನಿಯ ಪ್ರಚಾರಕರು ರೈತರ ವಿರುದ್ಧವಾಗಿ ಮಾತನಾಡಿದ್ದರಿಂದ ರೈತರು ಪ್ರಚಾರಕರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ರೂಪ ರೈತರ ಹೊಲಗಳಿಗೆ ಭೇಟಿ ನೀಡಿ ಜೋಳದ ಬೀಜಗಳ ಮೊಳಕೆ ಪ್ರಮಾಣ ಪರಿಶೀಲಿಸಿದರು.

‘ಸರ್ಕಾರ ನೀಡಿರುವ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವುದಷ್ಟೇ ನಮ್ಮ ಕೆಲಸ. ರೈತರಿಂದ ದೂರುಗಳು ಕೇಳಿ ಬಂದ ತಕ್ಷಣ ಸಿಪಿ-818 ತಳಿಯ ಜೋಳದ ಬಿತ್ತನೆ ಬೀಜ ಮಾರಾಟವನ್ನು ತಾಲ್ಲೂಕಿನ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬೇರೆ ತಳಿಯ ಬೀಜವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳಪೆ ಬಿತ್ತನೆ ಬೀಜ ಕುರಿತಂತೆ ಬಂದಿರುವ ದೂರಿನ ಬಗ್ಗೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಬುಧವಾರ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಬೀಜತಜ್ಞರ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದೆ’ ಎಂದರು.

ನೇರಳೆ ಘಟ್ಟದಲ್ಲಿ ಜೋಳ ಬಿತ್ತನೆ ಮಾಡಿರುವ ರೈತರ ಹೊಲಗಳಿಗೆ ಭೇಟಿ ನೀಡಿದ್ದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಬೀಜ ತಜ್ಞರಾದ ಡಾ.ವೆಂಕಟೇಗೌಡ ಪತ್ರಕರ್ತರೊಂದಿಗೆ ಮಾತನಾಡಿ, ‘ಮೇಲ್ನೋಟಕ್ಕೆ ಬೀಜ ಮೊಳಕೆ ಬರುವುದರಲ್ಲಿ ತೊಂದರೆ ಕಂಡುಬಂದಿದೆ. ತಜ್ಞರ ವರದಿ ಬರುವವರೆಗೂ ಸಿಪಿ-818 ತಳಿಯನ್ನು ತಾಲ್ಲೂಕಿನ ಬೇರೆ ಭಾಗದ ರೈತರು ಬಿತ್ತನೆ ಮಾಡಬಾರದು’ ಎಂದು ಸಲಹೆ ನೀಡಿದರು.

ಈ ಭಾಗದಲ್ಲಿ ಮಳೆ ಆಶ್ರಯದಲ್ಲಿ ವರ್ಷಕ್ಕೆ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯ. ಹೀಗಾಗಿ ಇಡೀ ವರ್ಷ ಉಳುಮೆ ಮಾಡಿ, ಭೂಮಿ ಹದಗೊಳಿಸಿ ಜೋಳದ ಬೀಜ ನಾಟಿ ಮಾಡಲಾಗಿದೆ. ಆದರೆ ಈಗ ನೋಡಿದರೆ ಶೇ 50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಜೋಳ ಮೊಳಕೆಯೊಡೆದಿದೆ. ಬಿತ್ತನೆ ಮಾಡಿದ 5 ರಿಂದ 7 ದಿನಗಳ ಒಳಗೆ ಜೋಳ ಮೊಳಕೆಯೊಡೆದು ಪೈರಾದರೆ ಮಾತ್ರ ಉತ್ತಮ ಇಳುವರಿ ಬರಲಿದೆ. ಆದರೆ 7 ದಿನವಾದರೂ ಮೊಳಕೆಯೇ ಒಡೆದಿಲ್ಲ. ಇದೇ ದಿನ ಬಿತ್ತನೆ ಮಾಡಿರುವ ಇತರ ಕಂಪನಿಯ ಬೀಜಗಳು ಮೊಳಕೆಯೊಡೆದು ಪೈರಾಗಿವೆ ಎನ್ನುವ ನೇರಳೆಘಟ್ಟ ಗ್ರಾಮದ ರೈತರಾದ ಚನ್ನರಾಯಪ್ಪ, ಧನಂಜಯ, ಮಧನ್‌ ಆರೋಪಿಸಿದರು.

ನೇರಳೆಘಟ್ಟ ಗ್ರಾಮದ ಪ್ರಗತಿಪರ ರೈತ ಹಾಗೂ ಮಾಹಿತಿ ನೀಡಿ ಎಂದು ಹೇಳಿದರು.

ಬೀಜ ಮೊಳಕೆ ಬರುವಲ್ಲಿ ತೊಂದರೆ ಕಂಡುಬಂದಿದೆ. ತಜ್ಞರ ವರದಿ ಬರುವವರೆಗೂ ಸಿಪಿ-818 ತಳಿಯನ್ನು ತಾಲ್ಲೂಕಿನ ಬೇರೆ ಭಾಗದ ರೈತರು ಬಿತ್ತನೆ ಮಾಡಬಾರದು.

- ಡಾ.ವೆಂಕಟೇಗೌಡ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೀಜ ತಜ್ಞ

***

ಕಳಪೆ ಬೀಜ ನಿಸ್ಸಂಶಯ

ನಮ್ಮ ಗ್ರಾಮ ಒಂದರಲ್ಲೇ ಸುಮಾರು 150 ಜನ ರೈತರು ನೀರಾವರಿ ಹಾಗೂ ಮಳೆ ಆಶ್ರಯ ಎರಡರಲ್ಲೂ ಸಿಪಿ-818 ತಳಿಯ ಮುಸುಕಿನಜೋಳದ ಬೀಜವನ್ನು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 80 ಕ್ವಿಂಟಲ್‌ ಬಿತ್ತನೆ ಬೀಜ ಮಾರಾಟವಾಗಿದೆ ಎನ್ನಲಾಗುತ್ತಿದೆ. ನಾಟಿ ಮಾಡಲಾಗಿರುವ ಬೀಜಗಳನ್ನು ಹೊರತೆಗೆದು ನೋಡಿದರೆ ಮೊಳಕೆಯೊಡೆಯುವ ಬದಲಿಗೆ ಬೀಜಗಳು ದಪ್ಪದಾಗಿ ಊದಿಕೊಂಡಿವೆ. ಯಾವುದೇ ಪ್ರಯೋಗಾಲಯದಲ್ಲಿ ಪರಿಶೀಲನೆ ಮಾಡದಲೇ ಇವು ಕಳಪೆ ಬೀಜ ಎಂದು ಹೇಳಬಹುದಾಗಿದೆ. ರೈತರಿಗೆ ವಂಚನೆ ಮಾಡಿರುವ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕೃಷಿ ಇಲಾಖೆ ಮತ್ತೆಂದೂ ಸಹ ಈ ಕಂಪನಿಯಿಂದ ಯಾವುದೇ ರೀತಿಯ ಬೀಜವನ್ನು ಖರೀದಿ ಮಾಡಬಾರದು.

- ಲಕ್ಷ್ಮೀನಾರಾಯಣ,‌ಹಣಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.