ADVERTISEMENT

ಕೊರೊನಾ ವೈರಸ್ ಹಾವಳಿ: ಕೆನಡಾದಲ್ಲಿ ಕಂಗೆಟ್ಟ ದೊಡ್ಡಬಳ್ಳಾಪುರದ ಕುವರಿ

‘ಪ್ರಜಾವಾಣಿ’ಯೊಂದಿಗೆ ಅಲ್ಲಿನ ಸ್ಥಿತಿಗತಿ ಹಂಚಿಕೊಂಡ ಯಾಶಿಕ

ನಟರಾಜ ನಾಗಸಂದ್ರ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST
ಮಾಂಟ್ರಿಯಲ್‌ ನಗರದಲ್ಲಿ ವಾಹನಗಳ ಸಂಚಾರ
ಮಾಂಟ್ರಿಯಲ್‌ ನಗರದಲ್ಲಿ ವಾಹನಗಳ ಸಂಚಾರ   

ದೊಡ್ಡಬಳ್ಳಾಪುರ: ಉನ್ನತ ವಿದ್ಯಾಭ್ಯಾಸ ಮಾಡುತ್ತಲೇ ಉದ್ಯೋಗ ನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರದ ಚೈತನ್ಯನಗರದ ನಿವಾಸಿ ಎನ್‌.ಯಾಶಿಕ ಸದ್ಯ ಕೆನಡಾ ದೇಶದ ಕ್ಯುಬೆಕ್‌ ರಾಜ್ಯದ ಮಾಂಟ್ರಿಯಲ್‌ ವಾಸವಾಗಿದ್ದಾರೆ. ಅಲ್ಲಿಯೂ ಕೂಡ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ ಜಾರಿಯಾಗಿದೆ. ಮನೆಯಲ್ಲಿಯೇ ಬಂಧಿಯಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅವರು, ‘ಪ್ರಜಾವಾಣಿ’ಯೊಂದಿಗೆ ಅಲ್ಲಿನ ಸ್ಥಿತಿಗತಿ ಹಂಚಿಕೊಂಡಿದ್ದಾರೆ.

‘ಕ್ಯುಬೆಕ್‌ ರಾಜ್ಯದಲ್ಲಿ ನವೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗೂ ಅನೇಕ ಸಂಸ್ಥೆಗಳು ಚಳಿಗಾಲದ ನಿಮಿತ್ತ ಮುಚ್ಚುತ್ತವೆ. ಇಲ್ಲಿ ವಿದ್ಯಾರ್ಥಿಯಾದರೂ ದುಡಿಮೆ ಇಲ್ಲದೆ ಬದುಕುವುದು ಕಷ್ಟ. ಇಂತಹದ್ದೇ ಕೆಲಸ ಬೇಕು ಎಂದು ಮಾರ್ಚ್ ತಿಂಗಳವರೆಗೂ ಕಾದು ಕುಳಿತಿದ್ದವರಿಗೆ ಕೊರೊನಾ ಹೆಮ್ಮಾರಿಯಾಗಿ ಅಪ್ಪಳಿಸಿ ಎಲ್ಲರನ್ನು ಕಂಗಾಲಾಗುವಂತೆ’ ಮಾಡಿದೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.

ಮಾರ್ಚ್ ಮೊದಲ ವಾರ ಮಾಂಟ್ರಿಯಲ್ ನಗರದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಸಂಗತಿ ತಿಳಿಯುತ್ತಲೇ ಇಲ್ಲಿ ಕೆಲಸ ಮಾಡುವ ಎಲ್ಲರಲ್ಲಿಯೂ ಕೊಂಚ ಆತಂಕ ಸೃಷ್ಟಿಯಾದರೂ ಎರಡನೇ ವಾರದವರೆಗೂ ಕೆಲಸ ಸುಗಮವಾಗಿಯೇ ಸಾಗಿತ್ತು. ಮಾರ್ಚ್ ಮೂರನೇ ವಾರದಲ್ಲಿ ಬಹಳಷ್ಟು ಸಂಸ್ಥೆಗಳು ಬಾಗಿಲು ಮುಚ್ಚಿದವು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನನ್ನ ಗೆಳತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ಕೊರೊನಾ ಸೋಂಕಿತರ ಬಗ್ಗೆ ಸರಿಯಾದ ಪರೀಕ್ಷೆ ನಡೆಯುತ್ತಿಲ್ಲ. ಮನೆಯಿಂದಲೇ ಕೆಲಸ ಮಾಡುವುದಾಗಿ’ ಅಭಿಪ್ರಾಯ ಹಂಚಿಕೊಂಡಿದ್ದರು ಎಂದು ಹೇಳಿದರು.

ADVERTISEMENT

‘ಬೆರಳಣಿಕೆ ಸಂಖ್ಯೆಯಲ್ಲಿ ಏರುತ್ತಿದ್ದ ಕೊರೊನಾ ಸೋಂಕಿತ ಸಂಖ್ಯೆ ಮೂರನೇ ವಾರಕ್ಕೆ ಸಾವಿರದ ಅಂಚಿಗೆ ಬಂದು ತಲುಪಿತ್ತು. ಹೊರಗಿನಿಂದ ಬರುವ ಎಲ್ಲಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಆದರೆ, ಅಮೆರಿಕದಿಂದ ಬರುವ ವಿಮಾನಗಳಿಗೆ ನಿರ್ಬಂಧ ಇಲ್ಲವಾಗಿದೆ. ಮುಖ್ಯವಾಗಿ ನಾನಿರುವ ಮಾಂಟ್ರಿಯಲ್ ಪಟ್ಟಣ ನ್ಯೂಯಾರ್ಕ್ ಪಕ್ಕದಲ್ಲೇ ಇರುವುದು ಹೆಚ್ಚಿನ ಆತಂಕ ಸೃಷ್ಟಿಸಿದೆ. ಇಲ್ಲಿಯೂ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ’ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.