ವಿಜಯಪುರ:ಪ್ರಾಣಿ, ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ.
ಬೆದರುಬೊಂಬೆ ನಿಲ್ಲಿಸುವುದು, ಸೀರೆ ಕಟ್ಟುವುದು, ಬಣ್ಣ ಬಣ್ಣದ ಪ್ಲಾಸ್ಟಿಕ್‌ಗಳನ್ನು ಟೇಪಿನಂತೆ ಜಮೀನಿನ ಸುತ್ತಾ ಸುತ್ತುವುದು, ಖಾಲಿ ಬಾಟಲಿಗಳನ್ನು ನೇತಾಕಿ, ಅದರ ಪಕ್ಕದಲ್ಲಿ ದಾರದಲ್ಲಿ ಕಲ್ಲುಗಳನ್ನು ಕಟ್ಟುವುದು, ಬಣ್ಣ ಬಣ್ಣದ ಬಟ್ಟೆಗಳನ್ನು ಗುಜ್ಜುಗಳಿಗೆ ನೇತು ಹಾಕುವ ಮೂಲಕ ಬೆಳೆಗಳ ಹತ್ತಿರ ಪ್ರಾಣಿ, ಪಕ್ಷಿಗಳು ಬಾರದಂತೆ ನೋಡಿಕೊಳ್ಳಲು ನಾನಾ ಪದ್ಧತಿ
ಅನುಸರಿಸುತ್ತಿದ್ದಾರೆ.
ತಾಲ್ಲೂಕಿನ ಹೊರವಲಯದ ನೀಲೆರಿ ಗ್ರಾಮ ಸಮೀಪದ ರೈತರು ತೋಟದಲ್ಲಿ ಬೆಳೆ ರಕ್ಷಣೆಗಾಗಿ ಈ ಪ್ರಯೋಗ ಮಾಡಿದ್ದಾರೆ. ಕವಲು ಒಡೆದ ಮರದ ರೆಂಬೆಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಕಟ್ಟಿ ಹಕ್ಕಿಗಳನ್ನು ಬೆದರಿಸುವ ಪ್ರಯೋಗ
ನಡೆಸಿದ್ದಾರೆ.
‘ಹಣ್ಣಿನ ಬೆಳೆಗಳು, ಹೂವಿನ ಬೆಳೆಗಳಿಗೆ ಹಕ್ಕಿಗಳ ಹಾವಳಿ ಅಧಿಕ. ಹಕ್ಕಿಗಳ ಹಾವಳಿ ನಿಯಂತ್ರಿಸಲು ನಾವು ಡ್ರಮ್ ಬಾರಿಸಿ ನೋಡಿದೆವು. ಕ್ಯಾಟರ್ ಬಿಲ್ ಬಳಕೆ ಮಾಡಿದೆವು. ಯಾವುದಕ್ಕೂ ಜಗ್ಗದಿದ್ದಾಗ ಕವಲುಗಳಿರುವ ಎತ್ತರದ ರೆಂಬೆಯೊಂದನ್ನು ಆರಿಸಿಕೊಂಡೆವು. ಅದಕ್ಕೆ ಬಣ್ಣ ಬಣ್ಣದ ಬಟ್ಟೆಗಳನ್ನು ಕಟ್ಟಿ ನಿಲ್ಲಿಸಿ, ಹಕ್ಕಿಗಳನ್ನು ಓಡಿಸುವ ಪ್ರಯತ್ನ ಮಾಡಿದೆವು. ಇದು ಯಶಸ್ವಿಯಾಗಿದೆ. ಅಲ್ಲದೇ ತೋಟಕ್ಕೆ ಬಂದವರು ನೋಡಲು ಸುಂದರವಾಗಿದೆ ಎಂದು ಪ್ರಶಂಸೆ ಮಾಡುತ್ತಿದ್ದಾರೆ’ ಎಂದು ರೈತ ವೀರಣ್ಣ ಹೇಳಿದರು.
ಗಿಣಿಗಳು, ಗೊರವಂಕ, ಕಾಗೆ ಹಣ್ಣು ಕಚ್ಚಿದಾಗ ಬಂದು ದಾಳಿ ಮಾಡುತ್ತವೆ. ಕೆಲವು ಚೂಪು ಕೊಕ್ಕಿನ ಹಕ್ಕಿಗಳು ಬಂದು ಹಣ್ಣಿನ ರಸ ಹೀರುತ್ತವೆ. ಈ ಪ್ರಯೋಗ ದ್ರಾಕ್ಷಿ ತೋಟಕ್ಕೂ ಮಾಡಬಹುದಾಗಿದೆ. ತೋಟಕ್ಕೆಲ್ಲಾ ಬಲೆ ಹಾಕುವುದರ ಬದಲು ಈ ದೇಸಿ ತಂತ್ರ ಬಳಸುವುದರಿಂದ ಯಾವುದೇ ಅನಾಹುತವೂ ಆಗುವುದಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.