
ದಾಬಸ್ ಪೇಟೆ: ಇಲ್ಲಿನ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಪಟ್ಟಣದ ಅಂದಗೆಡಿಸಿದೆ. ಇದಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು ಮತ್ತು ದಾಬಸ್ ಪೇಟೆ-ಹೊಸಕೋಟೆ ಹಾಗೂ ರಾಜ್ಯ ಹೆದ್ದಾರಿ ಮಧುಗಿರಿ- ರಾಮನಗರ ರಸ್ತೆಯ ಇಕ್ಕೆಲಗಳಲ್ಲಿ ಕಸ ಸಂಗ್ರಹಗೊಂಡಿದ್ದು, ವಿಲೇವಾರಿಯಾಗದೆ ಕೊಳೆತು ನಾರುತ್ತಿದೆ.
ದಾಬಸ್ ಪೇಟೆ ಪಟ್ಟಣ ಏಳು ಹಂತದ ಕೈಗಾರಿಕೆಗಳಿಂದಾಗಿ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರ ಜೊತೆಗೆ ತ್ಯಾಜ್ಯವೂ ಹೆಚ್ಚು ಸಂಗ್ರಹವಾಗುತ್ತಿದೆ. ವಾಸದ ಮನೆಗಳು, ಅಂಗಡಿಗಳು, ಸಂತೆ ವ್ಯಾಪಾರದಿಂದ ಪ್ಲಾಸ್ಟಿಕ್ ಹಾಗೂ ಇತರೆ ಕಸ ಅಧಿಕವಾಗುತ್ತಿದ್ದು ಬೀದಿಗಳಿಗೆ ಬಂದು ಬೀಳುತ್ತಿದೆ.
ದಾಬಸ್ ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಸೋಂಪುರ, ಆಗಲಕುಪ್ಪೆ ಮತ್ತು ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗಳು ಬರುತ್ತವೆ. ಕೆಲವು ಕಡೆಯ ರಸ್ತೆ ಬದಿಯ ಕಸ ಒಂದೊಂದು ಪಂಚಾಯಿತಿಗೆ ಬರುತ್ತದೆ. ವಾರಾನುಗಟ್ಟಲೆ ಕಸ ತೆಗೆಯದೆ ಬಿಟ್ಟಿರುತ್ತಾರೆ ಎಂಬುದು ನಾಗರಿಕರ ದೂರು.
ಕಸ ವಿಲೇವಾರಿಗೆ ವಾಹನಗಳು, ತ್ಯಾಜ್ಯ ಸಂಸ್ಕರಣ ಘಟಕಗಳು ಇದ್ದರೂ, ಕಸವನ್ನು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪ.
ಈಗಾಗಲೇ ಬೆಂಗಳೂರಿನಲ್ಲಿ ಕಸ ತಂದು ರಸ್ತೆಗೆ ಸುರಿಯುವವರ ಮನೆ ಮುಂದೆ, ಕಸ ಹಾಕುವಂತಹ ಯೋಜನೆ ರೂಪಿಸಲಾಗಿದೆ. ದಾಬಸ್ ಪೇಟೆ ಭಾಗದಲ್ಲೂ ಅಂತಹ ಕಾರ್ಯಾಚರಣೆ ಆಗಬೇಕು ಎನ್ನುತ್ತಾರೆ ಜನಸಾಮಾನ್ಯರು.
ಮನೆಗಳಲ್ಲಿ, ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ರಾತ್ರಿ ವೇಳೆ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಿದ್ದಾರೆ. ಇದು ಶೇಖರಣೆಗೊಂಡು ವಾಸನೆ ಬೀರುತ್ತಾ ರೋಗಗಳಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂಬುದು ದಾಬಸ್ ಪೇಟೆ ನಿವಾಸಿಗಳ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.