ಆನೇಕಲ್ : ದಸರಾ ಹಬ್ಬದ ಪ್ರಮುಖ ಆಚರಣೆ ಮನೆಗಳಲ್ಲಿ ಗೊಂಬೆ ಜೋಡಿಸುವುದು ವಾಡಿಕೆ. ಗೊಂಬೆಗಳ ಮೂಲಕ ಪ್ರಾಚೀನ ಪರಂಪರೆ, ಸಂಸ್ಕೃತಿ, ಧಾರ್ಮಿಕ ಭಾವನೆ ಬೆಳೆಸುವ ನಿಟ್ಟಿನಲ್ಲಿ ಗೊಂಬೆ ಇಟ್ಟು ಪೂಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಹಲವೆಡೆ ಗೊಂಬೆ ಕುಳ್ಳರಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಗಿರಿಜಾ ಕಾಟಿ ಕೃಷ್ಣಮೂರ್ತಿ ಅವರ ಮನೆಯಲ್ಲಿ ದಸರಾ ಗೊಂಬೆಗಳಲ್ಲಿ ಸಾಮಾಜಿಕ ವಿಚಾರದ ಗೊಂಬೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಇತಿಹಾಸ, ಪುರಾಣ, ಕೌಟುಂಬಿಕ ವಿಚಾರಗಳು ಸೇರಿದಂತೆ ವಿವಿಧ ರೂಪಕಗಳ ಗೊಂಬೆಗಳು ಕಣ್ಮನ ಸೆಳೆಯುತ್ತವೆ.
ಸೀತರಾಮ ಕಲ್ಯಾಣ, ಶ್ರೀನಿವಾಸ ಕಲ್ಯಾಣ, ಅಷ್ಟಲಕ್ಷ್ಮಿಯರು, ಗ್ರಾಮೀಣ ಜೀವನ ಶೈಲಿ, ಕುಂಬಾರರು ಮಡಕೆ ಮಾಡುತ್ತಿರುವುದು, ನಾದಸ್ವರ ಡೋಲು ಕಚೇರಿ, ಗ್ರಾಮೀಣ ಹೋಟೆಲ್, ಮದುವೆ ಆಚರಣೆ ಗೊಂಬೆಗಳು, ವಿವಿಧ ಬಗೆಗಳ ಬೈಕ್, ಕಾರುಗಳು ಪುಟಾಣಿಗಳನ್ನು ಸೆಳೆಯುತ್ತಿವೆ. ಸಾಮಾಜಿಕ ವಿಭಾಗದಲ್ಲಿ ಗಾಂಧೀಜಿ, ವಿವೇಕಾನಂದ, ಬುದ್ಧ, ಅಂಬೇಡ್ಕರ್ ಅವರ ಗೊಂಬೆಗಳು ಗಮನ ಸೆಳೆಯುತ್ತಿವೆ. ಧಾರ್ಮಿಕ ಮತ್ತು ಸಾಮಾಜಿಕ ರೂಪಕದಲ್ಲಿನ ಗೊಂಬೆಗಳು ಪ್ರತಿಯೊಬ್ಬರ ಕಣ್ಮನ ಸೆಳೆಯುತ್ತಿವೆ.
ಮರಿಯಪ್ಪ ಬಡಾವಣೆ ಶೀಲಾ ಶ್ರೀನಿವಾಸ್ ಮನೆಯಲ್ಲಿ ದಸರಾ ಗೊಂಬೆಗಳನ್ನು ಕುಳ್ಳರಿಸಲಾಗಿದ್ದು ಗಮನ ಸೆಳೆಯುತ್ತವೆ. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಗೊಂಬೆಗಳನ್ನು ವೀಕ್ಷಿಸುತ್ತಿದ್ದಾರೆ. ಪಟ್ಟಣದ ಗೊಂಬೆಗೆ ಪ್ರತಿನಿತ್ಯ ವಿಶೇಷ ಪೂಜೆ ಮಾಡಲಾಗುತ್ತಿದೆ.
ನಾರಾಯಣಘಟ್ಟ ಜಯರಾಮ್ ಅವರ ಮನೆಯಲ್ಲಿ ಗೊಂಬೆಗಳನ್ನು ಕುಳ್ಳರಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕುಳ್ಳರಿಸಿರುವುದು ವಿಶೇಷ. ದಶಾವತಾರ, ರಾಮಾಯಣ, ಮಹಾಭಾರತ, ಶ್ರೀವಾರಿ ಬ್ರಹ್ಮರಥೋತ್ಸವ, ಶ್ರೀರಾಮ ಪಟ್ಟಾಭಿಷೇಕ ಸೇರಿದಂತೆ ವಿವಿಧ ಗೊಂಬೆಗಳು ಕಣ್ಮನ ಸೆಳೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.