
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಯಾವುದೇ ಪ್ರಯಾಣಿಕರನ್ನು ಬಿಡಲು ಅಥವಾ ಕರೆದುಕೊಂಡು ಬರಲು ತೆರಳುವ ಕಾರುಗಳು ಹೆಚ್ಚು ಸಮಯ ನಿಲುಗಡೆ ಮಾಡಿದರೇ ಕಾರುಗಳ ಮೇಲೆ ದಂಡ ವಿಧಿಸುವ ನಿಯಮವನ್ನು ವಿಮಾನ ನಿಲ್ದಾಣ ಜಾರಿ ಮಾಡಲಿದೆ.
ಡಿಸೆಂಬರ್ 8ರಿಂದ ಹೊಸ ನಿಯಮ ಜಾರಿಯಾಗಲಿದ್ದು, 8 ನಿಮಿಷವಷ್ಟೇ ಆಗಮನ ಅಥವಾ ನಿರ್ಗಮನ ದ್ವಾರದ ಸಮೀಪ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗುತ್ತಿದೆ. ಹೆಚ್ಚಿನ ಸಮಯ ಸ್ವಂತ ಕಾರುಗಳು ನಿಲುಗಡೆ ಮಾಡಿದರೇ ದಂಡ ಪಾವತಿಸಿ ನಿಲುಗಡೆ ಮಾಡಬೇಕಾಗುತ್ತದೆ.
ಮೊದಲ 8 ನಿಮಿಷಗಳ ಕಾಲ ಸ್ವಂತ ವಾಹನಗಳಿಗೆ ಪಾರ್ಕಿಂಗ್ ಉಚಿತವಾಗಿದ್ದು, ನಂತರ 8-13 ನಿಮಿಷಗಳ ಕಾಲ ಉಳಿಯಲು ₹150, 12-18 ನಿಮಿಷ ₹300 ದಂಡ ವಿಧಿಸಲಾಗುತ್ತದೆ. ಅದಕ್ಕೂ ಮೀರಿ 18 ನಿಮಿಷಕ್ಕೂ ಹೆಚ್ಚಿನ ಕಾಲ ನಿಲ್ಲಿಸಿದ ಪಕ್ಷದಲ್ಲಿ ಪೊಲೀಸರಿಂದ ಕಾರನ್ನು ಟೋಯಿಂಗ್ ಮಾಡಲಾಗುತ್ತದೆ. ಟೋಯಿಂಗ್ ಮಾಡಿದ ಕಾರುಗಳಿಗೆ ದಂಡ ಹಾಗೂ ಟೋಯಿಂಗ್ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 1.3 ಲಕ್ಷ ಪ್ರಯಾಣಿಕರು ಬರುತ್ತಿದ್ದು, ವಾಹನ ದಟ್ಟಣೆಯೂ ಅಧಿಕವಾಗಿದೆ. ಇದನ್ನು ನಿಯಂತ್ರಣ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಶಿಸ್ತನ್ನು ತರಲು ಈ ಕ್ರಮ ಕೈಗೊಳ್ಳಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಸೈಡ್ ಪಿಕ್ ಅಪ್ ನಿಯಂತ್ರಣ
ಅನಧಿಕೃತ ಕ್ಯಾಬ್‌ಗಳು ಆಗಮನದ ದ್ವಾರ ಹಾಗೂ ನಿರ್ಗಮನ ರ‍್ಯಾಂಪ್‌ಗಳ ಹೊರಗೆ ದೀರ್ಘಕಾಲದ ನಿಲುಗಡೆಯಿಂದ ಹಾಗೂ ರಸ್ತೆಬದಿಯಲ್ಲೇ ಪಿಕ್-ಅಪ್ ಮಾಡಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆ ಪ್ರಮಾಣ ಹೆಚ್ಚುತ್ತಲೇ ಇದ್ದು ಹೊಸ ಪಾರ್ಕಿಂಗ್ ಕ್ರಮದಿಂದ ವ್ಯವಸ್ಥೆಯಿಂದ ಹಾಗೂ ದಂಡ ವಿಧಿಸುವ ಹಾಗೂ ಟೋಯಿಂಗ್ ಮಾಡುವುದರಿಂದ ಕ್ಯಾಬ್‌ಗಳ ದಟ್ಟಣೆ ಸುಧಾರಿಸಬಹುದಾಗಿದೆ.
ಎಲ್ಲಾ ಅಗ್ರಿಗೇಟರ್ ಕ್ಯಾಬ್‌ಗಳನ್ನು ನಿರ್ದೀಷ್ಟ ಪ್ರದೇಶದಲ್ಲಿ ಕಾರ್ಯಚರಣೆ ಮಾಡಲು ಸೂಚಿಸಲಾಗಿದ್ದು ನಿಯಮ ಮೀರಿ ವರ್ತಿಸುವ ಕ್ಯಾಬ್ ಚಾಲಕರ ಕ್ಯಾಬ್‌ಗಳನ್ನು ಪೊಲೀಸರು ಟೋಯಿಂಗ್ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳಲಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.