ADVERTISEMENT

ದೇವನಹಳ್ಳಿ ಜಿಲ್ಲಾ ಕೇಂದ್ರ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 6:01 IST
Last Updated 25 ಜನವರಿ 2023, 6:01 IST
ಜಿಲ್ಲಾ ಕೇಂದ್ರ ಹೋರಾಟ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರು 
ಜಿಲ್ಲಾ ಕೇಂದ್ರ ಹೋರಾಟ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರು    

ದೇವನಹಳ್ಳಿ: ಕಳೆದ ಆ. 15ರಂದು ಪಟ್ಟಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ದೇವನಹಳ್ಳಿಯನ್ನು ಒಂದು ತಿಂಗಳೊಳಗೆ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವುದು ಖಚಿತವೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್‌ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಈ ಬಗ್ಗೆ ಚಕಾರ ಎತ್ತಿಲ್ಲ ಎಂದು ಜಿಲ್ಲಾ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಿ.ಕೆ. ಶಿವಪ್ಪ ದೂರಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾತು ತಪ್ಪಿರುವ ಸುಧಾಕರ್‌ ಗಣ ರಾಜ್ಯೋತ್ಸವದಂದು ಧ್ವಜಾ ರೋಹಣ ಮಾಡುವ ನೈತಿಕತೆ ಉಳಿಸಿಕೊಂಡಿಲ್ಲ. ಭರವಸೆ ಈಡೇರಿಸದೆ ಅವರು ಕ್ಷೇತ್ರದ ಜನತೆ, ಹೋರಾಟಗಾರರು, ಸಂಘಟನೆಗಳಿಗೆ ಅವಮಾನ ಮಾಡಿದ್ದಾರೆ ಎಂದರು.

ADVERTISEMENT

ಕರವೇ ರಾಜ್ಯ ಘಟಕದ ಗೌರವಾಧ್ಯಕ್ಷ ಡಾ.ಎನ್. ಚಂದ್ರಶೇಖರ್‌ ಮಾತನಾಡಿ, ಅಮೃತ ಮಹೋತ್ಸವದ ವರ್ಷಾಚರಣೆಯಂದು ನೀಡಿದ್ದ ಭರವಸೆಗೆ ಸಚಿವರು ಬದ್ಧರಾಗಬೇಕು. ಆದರೆ, ಈಗ ಮಾತು ತಪ್ಪಿರುವ ಅವರು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ವಿನೋದ ಕುಮಾರಗೌಡ ಮಾತನಾಡಿ, ಜ. 26ರಂದು ಕೈಯಲ್ಲಿ ಜಿಲ್ಲಾ ಕೇಂದ್ರದ ಆದೇಶ ಪತ್ರ ಹಿಡಿದುಕೊಂಡು ಬಂದು ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಬೇಕು ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಮುನಿಶಾಮಪ್ಪ, ಜಿಲ್ಲಾ ಹೋರಾಟ ಸಮಿತಿಯ ಸೋಲೂರು ಶಿವಕುಮಾರ್‌, ನಾರಾಯಣಸ್ವಾಮಿ, ಅಂಜಿನಪ್ಪ, ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.