ADVERTISEMENT

ದೇವನಹಳ್ಳಿ: ಭಕ್ತಿ ಸಾಗರದಲ್ಲಿ ಮೊಳಗಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:22 IST
Last Updated 16 ಫೆಬ್ರುವರಿ 2026, 5:22 IST
ದೇವನಹಳ್ಳಿ ಪಟ್ಟಣದ ಪಾರ್ಕ್ ಶಾಲೆ ಪಕ್ಕದಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ಅಮ್ಮನವರಿಗೆ ಅರ್ಧನಾರೀಶ್ವರ ಅಲಂಕಾರ 
ದೇವನಹಳ್ಳಿ ಪಟ್ಟಣದ ಪಾರ್ಕ್ ಶಾಲೆ ಪಕ್ಕದಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ಅಮ್ಮನವರಿಗೆ ಅರ್ಧನಾರೀಶ್ವರ ಅಲಂಕಾರ    

ದೇವನಹಳ್ಳಿ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ, ನಿಯಮ ಮತ್ತು ಸಂಪ್ರದಾಯಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಭಾನುವಾರ ಮುಂಜಾನೆ ಭಕ್ತರು ಉಪವಾಸ ವ್ರತ ಕೈಗೊಂಡು ದೇವಾಲಯಗಳಿಗೆ ಆಗಮಿಸಿ ಶಿವನಿಗೆ ಭಕ್ತಿ ನಮನ ಸಲ್ಲಿಸಿದರು. ದೀಪಾರತಿ, ರುದ್ರಾಭಿಷೇಕ, ಭಜನೆ–ಕೀರ್ತನೆಗಳ ನಾದದಿಂದ ದೇವಾಲಯಗಳ ವಾತಾವರಣ ಭಕ್ತಿಮಯವಾಗಿತ್ತು.

ಪಟ್ಟಣದ ನಗರ್ತ ಬೀದಿಯಲ್ಲಿರುವ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಾರ್ಕ್ ಶಾಲೆ ಪಕ್ಕದ ಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ಅಮ್ಮನವರಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಗಿತ್ತು.

ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮದ ಗಂಗಾಧರೇಶ್ವರ ದೇವಾಲಯದಲ್ಲಿ ಸ್ವಾಮಿಗೆ ವಿಭಿನ್ನ ಹೂವಿನ ಅಲಂಕಾರ ಮಾಡಲಾಗಿತ್ತು. ಬೊಮ್ಮವಾರ ಗ್ರಾಮದ ಸುಂದರೇಶ್ವರ ದೇವಾಲಯದಲ್ಲಿ ಎಂಟು ಅಡಿ ಎತ್ತರದ ಸುಂದರೇಶ್ವರ ಲಿಂಗಕ್ಕೆ ಕವಚಾಭರಣ ಧರಿಸಲಾಗಿತ್ತು. ನಂದಿಯ ಭೋಗ ನಂದೀಶ್ವರ ಸನ್ನಿಧಿಯಲ್ಲಿ ಭಕ್ತಿ ಸಾಗರದಲ್ಲಿ ಭಕ್ತರು ಮೊಳಗದರು.

ADVERTISEMENT

ದೇವಾಲಯದಲ್ಲಿ ಮೂರು ದಿನಗಳ ಹಿಂದೆಯೇ ಶಿವರಾತ್ರಿ ಸಿದ್ಧತೆ ಕೈಗೊಂಡಿದ್ದು, ನಾಲ್ಕು ಯಾಮಗಳಲ್ಲಿ ಅರ್ಚಕರು ರುದ್ರಾಭಿಷೇಕ ನೆರವೇರಿಸಿದರು. ಬಳಿಕ ಕವಚಾಲಂಕಾರ ಮತ್ತು ಹೂವಿನ ಅಲಂಕಾರ ಮಾಡಿ ಮಹಾಪೂಜೆ ಸಲ್ಲಿಸಲಾಯಿತು. ಸಾಲುಗಟ್ಟಿದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ತಾಲ್ಲೂಕಿನ ಅರದೇಶನದಲ್ಲಿರುವ ಗಂಗಾಧರೇಶ್ವರ, ನಿಲೇರಿ ಜಪದ ಮಲ್ಲೇಶ್ವರ, ದಿಬ್ಬಗಿರೀಶ್ವರ, ಕೋಟೆ ನಂಜುಂಡೇಶ್ವರ, ಸಿದ್ಧೇಶ್ವರ, ವೀರಭದ್ರಸ್ವಾಮಿ, ಚಂದ್ರಮೌಳೇಶ್ವರ ಹಾಗೂ ನಗರೇಶ್ವರ ದೇವಾಲಯಗಳು ಶಿವರಾತ್ರಿ ಅಂಗವಾಗಿ ಭಕ್ತರ ಪ್ರಮುಖ ಆಕರ್ಷಣಾ ಕೇಂದ್ರಗಳಾಗಿದ್ದವು. ನೂರಾರು ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು ಇಡೀ ರಾತ್ರಿ ದೇವಾಲಯಗಳಲ್ಲಿ ಜಾಗರಣೆ ನಡೆಸಿದರು. ಸಾಮೂಹಿಕ ಭಜನೆ, ಭಕ್ತಿಗೀತೆ ಗಾಯನ ಮತ್ತು ಶಿವತತ್ವದ ಪ್ರವಚನಗಳು ನಡೆದವು.

ಶಿವರಾತ್ರಿಯ ಅಂಗವಾಗಿ ದೀಪಮಾಲೆ, ಲಿಂಗಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ವಿಧಿ–ವಿಧಾನಗಳು ನೆರವೇರಿದವು. ಎಲ್ಲೆಡೆ ‘ಓಂ ನಮಃ ಶಿವಾಯ’ ಘೋಷಣೆ ಮೊಳಗುತ್ತಾ, ಭಕ್ತರು ಶಿವಭಕ್ತಿಯಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡುಬಂತು. ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವು ಸಂಪ್ರದಾಯಬದ್ಧ ಆಚರಣೆ, ಭಕ್ತರ ನಾಮಸ್ಮರಣೆ ಮತ್ತು ಶಿವತತ್ವದ ಆರಾಧನೆಯೊಂದಿಗೆ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಗ್ರಾಮದ ಗಂಗಾಧರೇಶ್ವರ ದೇವಾಲಯದಲ್ಲಿಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.