ADVERTISEMENT

ವಿಜಯಪುರ | 44 ದಿನದಲ್ಲಿ 144 ಮಂದಿಗೆ ನಾಯಿ ಕಡಿತ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 17 ಫೆಬ್ರುವರಿ 2026, 4:48 IST
Last Updated 17 ಫೆಬ್ರುವರಿ 2026, 4:48 IST
ವಿಜಯಪುರದಲ್ಲಿ ಬಂದ ಬೀದಿ ನಾಯಿಗಳ ಹಿಂಡು(ಸಂಗ್ರಹ ಚಿತ್ರ)
ವಿಜಯಪುರದಲ್ಲಿ ಬಂದ ಬೀದಿ ನಾಯಿಗಳ ಹಿಂಡು(ಸಂಗ್ರಹ ಚಿತ್ರ)   

ವಿಜಯಪುರ (ದೇವನಹಳ್ಳಿ): ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 144 ಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೊಳಗಾಗಿದ್ದಾರೆ.

ಬರೀ 44 ದಿನಗಳಲ್ಲಿ ವಿಜಯಪುರ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆಗೆ ಒಳಗಾಗಿರುವವರ ಸಂಖ್ಯೆ ಮೂರಂಕಿಯಲ್ಲಿದೆ. ಬೀದಿ ನಾಯಿಗಳ ಕಡಿತಕ್ಕೆ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಯಭೀತರಾಗಿದ್ದಾರೆ.

ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಬೆಳಗಿನ ಜಾವ ಕೆಲಸಕ್ಕೆ ತೆರಳುವ ನಾಗರಿಕರು, ಮನೆ ಮನೆಗೆ ಹಾಲು, ದಿನಪತ್ರಿಕೆ ಹಾಕುವ ಹುಡುಗರ ಮೇಲೆಯೇ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಪಟ್ಟಣದ ಜನರು ಬೆಂಳಬೆಳ್ಳಗೆ ಹೂ, ಹಣ್ಣು, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಲು ಭಯ ಪಡುವಂತಾಗಿದೆ.

ADVERTISEMENT

ಅಲ್ಲದೇ ರಸ್ತೆ ಬದಿಗಳಲ್ಲಿ ತೆರೆದಿರುವ ಕೋಳಿ ಅಂಗಡಿಯವರು ರಸ್ತೆ ಬದಿಗಳಲ್ಲಿ ಕೋಳಿ ಮಾಂಸದ ತ್ಯಾಜ್ಯ ಸುರಿಯುವುದರಿಂದ ಇದನ್ನು ತಿನ್ನಲು ಬರುವ ನಾಯಿಗಳು ರಸ್ತೆಗಳಿಗೆ ಅಡ್ಡಲಾಗಿ ದ್ವಿಚಕ್ರ ವಾಹನಗಳಿಗೆ ಸಿಲುಕುವುದರಿಂದ ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸಿ, ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.

ಗ್ರಾಮೀಣ ಭಾಗದಲ್ಲಿ ಹೆಚ್ಚಳ: ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿದೆ. ಸ್ಥಳೀಯರು ರಸ್ತೆಗಿಳಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಆಡಳಿತವು ಶೀಘ್ರವೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.

ಪೋಷಕರಲ್ಲಿ ಆತಂಕ: ಈಚೆಗೆ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ ಬೀದಿ ನಾಯಿಗಳು ದಾಳಿ ಮಾಡಿದ್ದು, ವಿದ್ಯಾರ್ಥಿ ತೀವ್ರ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಘಟನೆ ನಡೆದ ಬಳಿಕ ಪೋಷಕರು ತಮ್ಮ ಮಕ್ಕಳು ಮನೆಯಿಂದ ಶಾಲೆಗೆ ಹೋಗಿ, ಮನೆಗೆ ಸುರಕ್ಷತೆಯಿಂದ ವಾಪಸ್ ಬರುವವರೆಗೂ ಆತಂಕ ಪಡುವಂತಾಗಿದೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧಪಟ್ಟಂತೆ ಪುರಸಭೆಯ ಪ್ರತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ.

ಔಷಧಿ ಕೊರತೆಯಾಗದಂತೆ ನಿಗಾ: ಈಚೆಗೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆಸ್ಪತ್ರೆಯಲ್ಲಿ ಚುಚ್ಚುಮದ್ದು, ಔಷಧಿಗಳು ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ವಿಜಯಪುರ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ತಿಳಿಸಿದರು.

ಪ್ರಕರಣಗಳ ವಿವರ: ಜನವರಿ 1 ರಿಂದ ಫೆ.13 ರವರೆಗೆ ವಿಜಯಪುರ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಒಟ್ಟು 144 ಮಂದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಮಕ್ಕಳು, ಮಹಿಳೆಯರು ಸೇರಿ ವೃದ್ಧರೂ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಜನವರಿ ತಿಂಗಳಲ್ಲಿ 101 ನಾಯಿ ಕಡಿತ, ಕೋತಿ, ಬೆಕ್ಕು, ಇತರೆ ಕಡಿತ 13 ಹೊಂದಿದ್ದು, ಫೆಬ್ರವರಿ 13 ರೊಳಗೆ 43 ನಾಯಿ ಕಡಿತ ಪ್ರಕರಣ ದಾಖಲಾಗಿದೆ.

ಸಂಗ್ರಹ ಚಿತ್ರ
ವಿಜಯಪುರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸ್ಥಳೀಯ ಆಡಳಿತ ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು.
ಕಿರಣ್ ವಿಜಯಪುರ ನಿವಾಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.