ADVERTISEMENT

ಡಿಜಿಟಲ್‌ ಇ–ಸ್ಟ್ಯಾಂಪ್‌: ಹೊಸ ಸವಾಲು

ಭೌತಿಕ ಸ್ಟ್ಯಾಂಪ್‌ಗೆ ತೆರೆ * ಅಕ್ರಮಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:39 IST
Last Updated 12 ಜನವರಿ 2026, 4:39 IST
ಎಐ ಚಿತ್ರ: ಗೂಗಲ್‌ ಜೆಮಿನಿ
ಎಐ ಚಿತ್ರ: ಗೂಗಲ್‌ ಜೆಮಿನಿ   

ದೇವನಹಳ್ಳಿ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ನಡೆಯುತ್ತಿದ್ದ ನಕಲಿ ಕರಾರು, ಸಹಿ ಕಳವು, ಕಡಿಮೆ ಮೌಲ್ಯದ ಸ್ಟ್ಯಾಂಪ್‌ ದುರುಪಯೋಗಕ್ಕೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್‌ ಇ–ಸ್ಟ್ಯಾಂಪ್‌ ವ್ಯವಸ್ಥೆ ಅಕ್ರಮಗಳಿಗೆ ಕಡಿವಾಣ ಹಾಕುವತ್ತ ಮಹತ್ವದ ಹೆಜ್ಜೆಯಾಗಿದೆ. ಆದರೆ, ಇದೇ ವ್ಯವಸ್ಥೆ ಸಾರ್ವಜನಿಕರಿಗೆ ತಾಂತ್ರಿಕ ಸವಾಲಾಗಿ ಪರಿಣಮಿಸುವ ಲಕ್ಷಣವೂ ಕಾಣಿಸುತ್ತಿದೆ.

ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸೌಧದ ನ್ಯಾಯ ಸಭಾಂಗಣದಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಕೀಲರು, ಸಾರ್ವಜನಿಕರು, ಪತ್ರ ಬರಹಗಾರರು ಹಾಗೂ ಸಹಕಾರಿ ಬ್ಯಾಂಕ್‌ ಸಿಬ್ಬಂದಿಗಳಿಗೆ ಡಿಜಿಟಲ್‌ ಇ–ಸ್ಟ್ಯಾಂಪ್‌ ಪಡೆಯುವ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ದೇವನಹಳ್ಳಿಯ ಉಪನೋಂದಣಾಧಿಕಾರಿಗಳಾದ ಸಂತೋಷ್‌ ಹಾಗೂ ನಾಗೇಂದ್ರ ಅವರು ವ್ಯವಸ್ಥೆಯ ತಾಂತ್ರಿಕ ಅಂಶಗಳನ್ನು ವಿವರಿಸಿದರು.

ಭೌತಿಕ ಸ್ಟ್ಯಾಂಪ್‌ಗೆ ತೆರೆ

ADVERTISEMENT

ಇಲ್ಲಿವರೆಗೆ ಕಡಿಮೆ ಮೌಲ್ಯದ ಭೌತಿಕ ಇ–ಸ್ಟ್ಯಾಂಪ್‌ ಪತ್ರಗಳನ್ನು ಬಳಸಿ ಹೆಚ್ಚಿನ ಮೊತ್ತದ ವ್ಯವಹಾರ ನಡೆಸುತ್ತಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿತ್ತು. ಜೊತೆಗೆ ಕರಾರು ನಕಲು, ಅಂಶ ಬದಲಾವಣೆ, ನಕಲಿ ಸಹಿಗಳಿಂದ ಸಾರ್ವಜನಿಕರು ಅನಾವಶ್ಯಕ ಕಾನೂನು ವ್ಯಾಜ್ಯಗಳಲ್ಲಿ ಸಿಲುಕುತ್ತಿದ್ದರು. ಈ ಎಲ್ಲ ಅಕ್ರಮಗಳನ್ನು ತಡೆಯಲು ಡಿಜಿಟಲ್‌ ಇ–ಸ್ಟ್ಯಾಂಪ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

ಖಾಲಿ ಇ–ಸ್ಟ್ಯಾಂಪ್‌ಗೆ ಅವಕಾಶವಿಲ್ಲ

ಹೊಸ ವ್ಯವಸ್ಥೆಯಲ್ಲಿ ಖಾಲಿ ಇ–ಸ್ಟ್ಯಾಂಪ್‌ ಪತ್ರಗಳು ಸಿಗುವುದಿಲ್ಲ. ಕರಾರು ಪತ್ರದಲ್ಲಿ ಮುದ್ರಿತವಾಗಬೇಕಾದ ಎಲ್ಲ ವಿವರಗಳನ್ನು ಮೊದಲು ಕಾವೇರಿ 2.0 ತಂತ್ರಾಂಶದಲ್ಲಿ ಡ್ರಾಫ್ಟ್‌ ರೂಪದಲ್ಲಿ ಅಪ್‌ಲೋಡ್‌ ಮಾಡಬೇಕು. ಆ ಮಾಹಿತಿಯ ಆಧಾರದ ಮೇಲೆ ಮಾತ್ರ ಡಿಜಿಟಲ್‌ ಇ–ಸ್ಟ್ಯಾಂಪ್‌ ಸೃಜಿಸಲಾಗುತ್ತದೆ. ಇದರಿಂದ ಕರಾರು ನಕಲು ಅಥವಾ ನಂತರದ ತಿದ್ದುಪಡಿ ಅಸಾಧ್ಯವಾಗಲಿದೆ.

ಆಧಾರ್‌ ಇದ್ದರೆ ಮಾತ್ರ ಇ–ಸ್ಟ್ಯಾಂಪ್‌

ಯಾವುದೇ ಕರಾರಿಗೆ ಸಂಬಂಧಿಸಿದ ಡಿಜಿಟಲ್‌ ಇ–ಸ್ಟ್ಯಾಂಪ್‌ ಪಡೆಯಲು ಎಲ್ಲ ಪಕ್ಷಗಾರರು ಆಧಾರ್‌ ಅಥವಾ ಡಿಎಸ್‌ಸಿ ಮೂಲಕ ಡಿಜಿಟಲ್‌ ಸಹಿ ಮಾಡಬೇಕು. ಸಾಕ್ಷಿದಾರರೂ ಆಧಾರ್‌ ಆಧಾರಿತ ಒಟಿಪಿ ಮೂಲಕ ಸಹಿ ಮಾಡಿದ ಬಳಿಕವೇ ಇ–ಸ್ಟ್ಯಾಂಪ್‌ ಸಿದ್ಧವಾಗುತ್ತದೆ. ಇದರಿಂದ ‘ನಾವು ಕರಾರು ಮಾಡಿಲ್ಲ’ ಎಂಬ ನೆಪದಲ್ಲಿ ಸುಳ್ಳು ದೂರು ಸಲ್ಲಿಸುವ ಅವಕಾಶ ಕಡಿಮೆಯಾಗಲಿದೆ.

ಇ–ಖಾತೆ ಕಡ್ಡಾಯ

ಬಾಡಿಗೆ ಕರಾರು, ಮಾರಾಟ ಒಪ್ಪಂದ ಸೇರಿದಂತೆ ಯಾವುದೇ ಸ್ಥಿರಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಕರಾರು ಮಾಡಬೇಕಾದರೆ ಆ ಆಸ್ತಿಗೆ ಇ–ಖಾತೆ ಕಡ್ಡಾಯ. ಇ–ಖಾತೆ ಇಲ್ಲದ ಆಸ್ತಿಗೆ ಅಧಿಕೃತವಾಗಿ ಡಿಜಿಟಲ್‌ ಇ–ಸ್ಟ್ಯಾಂಪ್‌ ಮೂಲಕ ಕರಾರು ಮಾಡಿಕೊಳ್ಳಲು ಸಾಧ್ಯವಿಲ್ಲ. ಇ–ಖಾತೆಯ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳ ಡೇಟಾಬೇಸ್‌ನಿಂದ ಆಸ್ತಿ ವಿವರಗಳು ಸ್ವಯಂಚಾಲಿತವಾಗಿ ಇ–ಸ್ಟ್ಯಾಂಪ್‌ನಲ್ಲಿ ಅಳವಡಿಸಲಾಗುತ್ತದೆ.

ಅಕ್ರಮಕ್ಕೆ ಇಲ್ಲ ಅವಕಾಶ; ಆದರೆ ಜನಸ್ನೇಹಿಯಾಗಿಲ್ಲ?

ಡಿಜಿಟಲ್‌ ಇ–ಸ್ಟ್ಯಾಂಪ್‌ ವ್ಯವಸ್ಥೆ ಅಕ್ರಮಗಳಿಗೆ ಬ್ರೇಕ್‌ ಹಾಕುವಲ್ಲಿ ಪರಿಣಾಮಕಾರಿಯಾದರೂ, ಸಾರ್ವಜನಿಕರಿಗೆ ಇದು ಸುಲಭ ಪ್ರಕ್ರಿಯೆಯಾಗಿಲ್ಲ ಎಂಬ ಅಸಮಾಧಾನವೂ ಕೇಳಿಬರುತ್ತಿದೆ. ಡಿಜಿಟಲ್‌ ಇ–ಸ್ಟ್ಯಾಂಪ್‌ ಪಡೆಯಲು ಉತ್ತಮ ಕಂಪ್ಯೂಟರ್‌ ಜ್ಞಾನ, ವೇಗದ ಇಂಟರ್‌ನೆಟ್‌, ಆಧಾರ್‌ ಸರ್ವರ್‌, ಕಾವೇರಿ 2.0 ಹಾಗೂ ಸ್ಥಳೀಯ ಸಂಸ್ಥೆಗಳ ಸರ್ವರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸರ್ವರ್‌ ದೋಷ ಅಥವಾ ಒಟಿಪಿ ವಿಳಂಬವಾದರೆ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ.

ಡಿಜಿಟಲ್ ಇ-ಸ್ಟ್ಯಾಂಪ್ ಮಾದರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.