ದೊಡ್ಡಬಳ್ಳಾಪುರ: ನಗರಸಭೆ ಅಂದಾಜಿನಂತೆ ಈಗಿನ ಜನ ಸಂಖ್ಯೆ 1.25 ಲಕ್ಷ ಮುಟ್ಟಿದೆ. ಸುಮಾರು 5 ಕಿ.ಮೀ ಸುತ್ತಳತೆಯಷ್ಟು ವಿಸ್ತಾರವಾಗಿ ಬೆಳೆದಿರುವ ದೊಡ್ಡಬಳ್ಳಾಪುರ ನಗರಕ್ಕೆ ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಎರಡನೇ ಕ್ರೀಡಾಂಗಣ ಬೇಕೆಂಬ ಕೂಗು ಎದ್ದಿದೆ.
ಈಗ ನಗರದ ಸೋಮೇಶ್ವರ ಬಡಾವಣೆ ಸಮೀಪ ಇರುವ ಯುವಜನ ಸೇವಾ ಇಲಾಖೆಯ ಸುಮಾರು ಆರು ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಭಗತ್‌ಸಿಂಗ್ ಕ್ರೀಡಾಂಗಣ ಇದೆ. ಆದರೆ ಜನಸಂಖ್ಯೆ ಹಾಗೂ ಕ್ರೀಡಾ ಕಲಿಕೆಗಳಿಗೆ ಸಾಲದಾಗಿದೆ. ಈ ಕ್ರೀಡಾಂಗಣ ನಗರದ ಆಯಕಟ್ಟಿನ ಸ್ಥಳದಲ್ಲಿ ಇರುವುದರಿಂದ ಬೆಳಗ್ಗೆ 5 ಗಂಟೆಯಿಂದ 8 ಗಂಟೆ ಹಾಗೂ ಸಂಜೆ 5 ರಿಂದ ರಾತ್ರಿ 9 ಗಂಟೆವರೆಗೂ ಯುವಕರಿಂದ ಮೊದಲುಗೊಂಡು ವೃದ್ಧರವರೆಗೂ ನೂರಾರು ಜನ ವಾಯುವಿಹಾರಕ್ಕೆ ಬರುತ್ತಾರೆ. ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳು ಅಭ್ಯಾಸಕ್ಕೆ ಬರುತ್ತಾರೆ.
ಓಟದ ಅಭ್ಯಾಸ ಮಾಡುವುವವರು, ವಾಲಿಬಾಲ್, ಫುಟ್‌ಬಾಲ್, ಹತ್ತಾರು ಕ್ರಿಕೇಟ್ ಅಭ್ಯಾಸ ಮಾಡುವ ತಂಡಗಳು, ಕೋಕೋ ಹೀಗೆ ತರಹೇವಾರಿ ಕ್ರೀಡೆಗಳಲ್ಲಿ ತೊಡಗಿರುವ ಎಲ್ಲರೂ ಒಂದೇ ಕ್ರೀಡಾಂಗಣದಲ್ಲಿ ತುಂಬಿರುತ್ತಾರೆ. ಯಾರೊಬ್ಬರು ಪರಿಪೂರ್ಣವಾಗಿ ಅಭ್ಯಾಸ ಮಾಡಲು ಸಾಧ್ಯವಾಗದೇ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಸಾಮರ್ಥ್ಯ, ಆಸಕ್ತಿ ಇದ್ದರು ಸಹ ಸೌಲಭ್ಯ ಇಲ್ಲದೆ ವಂಚಿತರಾಗುವಂತಾಗಿದೆ.
ಜನ ಏನಂತಾರೆ?
ಪ್ರತ್ಯೇಕ ಕ್ರೀಡಾಂಗಣ ಅಗತ್ಯ
ಸುರಕ್ಷತೆ ದೃಷ್ಠಿಯಿಂದ ಭಗತ್‌ಸಿಂಗ್ ಕ್ರೀಡಾಂಗಣ ಮಹಿಳೆಯರಿಗೆ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಇದೆ. ಹೀಗಾಗಿ ವಾಯುವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಯುವತಿಯರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಏಕ ಕಾಲಕ್ಕೆ ಎಲ್ಲಾ ರೀತಿಯ ಕ್ರೀಡೆಗಳಲ್ಲೂ ಅಭ್ಯಾಸದಲ್ಲಿ ತೊಡಗಿರುವುದರಿಂದ ವಾಯುವಿಹಾರಕ್ಕೆ ಅಡ್ಡಿಯಾಗುತ್ತಿದೆ. ಕ್ರೀಡೆಗಳ ಅಭ್ಯಾಸಕ್ಕಾಗಿಯೇ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಅಗತ್ಯವಿದೆ – ನಯನಾಸ್ವರೂಪ್ ಸ್ಥಳೀಯ ನಿವಾಸಿ
ಆಧುನಿಕ ಕ್ರೀಡಾ ಸೌಲಭ್ಯ ಬೇಕು
ದೊಡ್ಡಬಳ್ಳಾಪುರ ನಗರ ವಿಸ್ತಾರವಾಗಿ ಬೆಳೆದಿರುವ ದೃಷ್ಠಿಯಿಂದ ಹಾಗೂ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಿವಿಧ ಕ್ರೀಡೆಗಳಲ್ಲೂ ಸಾಧನೆ ಮಾಡುವರು ಹೆಚ್ಚು ಇದ್ದಾರೆ. ಈ ಎಲ್ಲಾ ಕಾರಣದಿಂದ ನಗರಕ್ಕೆ ಆಧುನಿಕ ಕ್ರೀಡಾ ಸೌಲಭ್ಯ ವಿವಿಧ ಕ್ರೀಡೆಗಳ ಅಭ್ಯಾಸಕ್ಕೆ ಅಗತ್ಯ ಇರುವಂತೆ ಮತ್ತೊಂದು ಕ್ರೀಡಾಂಗಣ ನಿರ್ಮಾಣ ಮಾಡುವ ತುರ್ತು ಅಗತ್ಯ ಇದೆ – ಮಂಜುನಾಥ್ ಕುಂಟನಹಳ್ಳಿ, ಸ್ಥಳೀಯ ನಿವಾಸಿ
ಬಾಲ್ ಚರಂಡಿಗೆ ಬೀಳುತ್ತಿದೆ
ಭಗತ್ ಸಿಂಗ್ ಕ್ರೀಡಾಂಗಣ ಒಳಗೆ ಚರಂಡಿ ನೀರು ಹರಿದು ಹೋಗುವ ಕಾಲುವೆ ಇದೆ. ಈ ಕಾಲುವೆ ಮೇಲೆ ಸ್ಲಾಬ್‌ಗಳ ಮುಚ್ಚಳ ಹಾಕಿಲ್ಲ. ಇದರಿಂದ ದುರ್ನಾತ ಬರುತ್ತದೆ. ಅಲ್ಲದೆ ಆಟ ಆಡುವಾಗ ಬಾಲ್‌ಗಳು ಹೋಗಿ ಕೊಚ್ಚೆ ನೀರಿನ ಚರಂಡಿಗೆ ಬಿಳುತ್ತಿವೆ. ಕ್ರೀಡಾಂಗಣದಲ್ಲೇ ಒಳಚರಂಡಿ ಪೈಪ್‌ಲೈನ್ ಹಾದು ಹೋಗಿರುವ ಕಡೆಗಳಲ್ಲಿರುವ ಛೇಂಬರ್‌ಗಳು ಓಡುವವರಿಗೆ ವಾಯುವಿಹಾರಿಗಳಿಗೆ ಅಡ್ಡಿಯಾಗಿವೆ – ಡಿ.ಜಿ.ಹೃಷಿಕೇಶ್, ವಿದ್ಯಾರ್ಥಿ
ವಿದ್ಯುತ್ ದೀಪ ಇಲ್ಲ
ಭಗತ್‌ಸಿಂಗ್ ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವನಿಕರು ಬರುತ್ತಾರೆ. ಇಲ್ಲಿ ಸೂಕ್ತ ವಿದ್ಯುತ್ ದೀಪಗಳ ಸೌಲಭ್ಯ ಇಲ್ಲದಾಗಿದೆ. ಹೈಮಾಸ್ ದೀಪಗಳನ್ನು ಅಳವಡಿಸುವಂತೆ ನಗರಸಭೆ ಹಾಗೂ ತಾಲ್ಲೂಕು ಆಡಳಿತಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದರು. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ – ಗಿರೀಶ್‌ಕುಮಾರ್, ವಾಯುವಿಹಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.