ADVERTISEMENT

ದೊಡ್ಡಬಳ್ಳಾಪುರ: 350ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಶುಲ್ಕ ಹೆಚ್ಚಳ

ಪರಿಹಾರ ಕಂಡು ಹಿಡಿಯುವವರಿಗೆ ಶುಲ್ಕ ಪಾವತಿಸದಿರಿ: ಶಾಸಕ ಧೀರಜ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:49 IST
Last Updated 11 ಅಕ್ಟೋಬರ್ 2025, 2:49 IST
ದೊಡ್ಡಬಳ್ಳಾಪುರದ ಅಂಬೇಡ್ಕರ್‌ ಭವನದಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ಬೆಸ್ಕಾಂ ಕುಂದು ಕೊರತೆ ಸಭೆ ನಡೆಯಿತು
ದೊಡ್ಡಬಳ್ಳಾಪುರದ ಅಂಬೇಡ್ಕರ್‌ ಭವನದಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ಬೆಸ್ಕಾಂ ಕುಂದು ಕೊರತೆ ಸಭೆ ನಡೆಯಿತು   

ದೊಡ್ಡಬಳ್ಳಾಪುರ: ನಗರದ ಕರೇನಹಳ್ಳಿ ವಾರ್ಡ್‌ನಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿಗೆ ಏಕಾಏಕಿ ಸಾವಿರಾರು ರೂಪಾಯಿಗಳ ವಿದ್ಯುತ್‌ ಶುಲ್ಕ ಹೆಚ್ಚಾಗಿದ್ದು, ಕಾರಣ ಕೇಳಿದರೆ ಲೈನ್ ಮನ್, ಬೆಸ್ಕಾಂ ಅಧಿಕಾರಿಗಳು ಉದಾಸೀನತೆಯ ಉತ್ತರ ನೀಡುತ್ತಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ಬಳಿ ಸ್ಥಳೀಯ ನಿವಾಸಿಗಳು ಆಳಲುತೋಡಿಕೊಂಡರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಬೆಸ್ಕಾಂ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ತಮ್ಮ ಸಮಸ್ಯೆಗಳಿಗೆ ಪ್ರಕ್ರಿಯಿಸಿದ ಶಾಸಕ ಧೀರಜ್ ಮುನಿರಾಜು ‘ಯಾವ ಕಾರಣದಿಂದಾಗಿ ಹೀಗೆ ವಿದ್ಯುತ್‌ ಶುಲ್ಕ ಏಕಾಏಕಿ ಹೆಚ್ಚಾಗಿ ಬಂದಿದೆ ಎನ್ನುವುದಕ್ಕೆ ಪರಿಹಾರ ಕಂಡುಹಿಡಿಯುವವರೆಗೂ ಸಾರ್ವಜನಿಕರು ಶುಲ್ಕ ಪಾವತಿಸಬಾರದು. ಈ ಬಗ್ಗೆ ಅಗತ್ಯ ಬಿದ್ದರೆ ಇಂಧನ ಸಚಿವರ ಬಳಿಯೂ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

ತಾಲ್ಲೂಕಿನಾದ್ಯಂತ 70 ವರ್ಷಗಳ ಮೇಲ್ಪಟ್ಟ ವಿದ್ಯುತ್ ಲೈನ್ ಮತ್ತು ಕಂಬಗಳನ್ನು ತೆರವು ಮಾಡಿ ನೂತನ ಲೈನ್, ಕಂಬ ಅಳವಡಿಸಲು ಕಸಾಘಟ್ಟ ರೈತರು ಮನವಿ ಮಾಡಿದರು.

ADVERTISEMENT

ಹೊಸದಾಗಿ ನಿರ್ಮಿಸುತ್ತಿರುವ ಮನೆಗಳಿಗೆ ನಿರಾಪೇಕ್ಷಣಾ ಪತ್ರ(ಎನ್‌ಒಸಿ) ಮತ್ತು ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಸುಖಾಸುಮ್ಮನೆ ಅಲೆಸುತ್ತಾರೆ ಎಂದು ನಗರ ನಿವಾಸಿಗಳು ದೂರಿದರು. ಬೈಯಪ್ಪನಹಳ್ಳಿ ಸೇರಿದಂತೆ ತಾಲ್ಲೂಕಿನಲ್ಲಿ ಕೃಷಿಗೆ ಒಂದೇ ರೀತಿಯ ವೋಲ್ಟೇಜ್ ವಿದ್ಯುತ್ ಸರಬರಾಜು ಮಾಡಲು ಮನವಿ ಮಾಡಿದರು.

ಬಂಕೇನಹಳ್ಳಿ ರೈತ ರವಿ ಎಂಬುವವರು ವಿದ್ಯುತ್‌ ಪರಿವರ್ತಕ(ಟಿಸಿ) ನೀಡುವಂತೆ ಮನವಿ ಮಾಡಿ ಹಲವು ತಿಂಗಳು ಕಳೆದರೂ ಕ್ರಮಕೈಗೊಂಡಿಲ್ಲ. ಶೀಘ್ರವಾಗಿ ಟಿಸಿ ಹಾಕಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.

ಬೆಸ್ಕಾಂ ನಗರ ಉಪವಿಭಾಗದ ಕಾರ್ಯಾಪಾಲಕ ಎಂಜಿನಿಯರ್‌ ವಿನಯ್‌ಕುಮಾರ್‌, ಗ್ರಾಮಾಂತರ ಉಪವಿಭಾಗದ ಕಾರ್ಯಾಪಾಲಕ ಎಂಜಿನಿಯರ್‌ ಮಂಜುನಾಥ ಇದ್ದರು.

ಕುಂದು ಕೊರತೆ ಸಭೆಗೆ ಬಾರದ ಜನತೆ

ಪ್ರಚಾರದ ಕೊರತೆಯಿಂದಾಗಿ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಬೆಸ್ಕಾಂ ಇಲಾಖೆ ಆಯೋಜಿಸಿದ್ದ ಕುಂದು ಕೊರತೆ ಸಭೆಗೆ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹೊರತು ಬೆರಳೆಣಿಕೆಯಷ್ಟು ಜನ ಸಾರ್ವಜನಿಕರು ಮಾತ್ರ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.