ADVERTISEMENT

ದೊಡ್ಡಬಳ್ಳಾಪುರ: ಗುಜರಾತ್ ಮಾದರಿಯಲ್ಲಿ ನೇಕಾರಿಕೆಗೆ ಉತ್ತೇಜನ– ಆರ್‌.ಅಶೋಕ್‌

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:16 IST
Last Updated 23 ಫೆಬ್ರುವರಿ 2026, 2:16 IST
ದೊಡ್ಡಬಳ್ಳಾಪುರ ಭಗತ್ ಸಿಂಗ್ ಕ್ರೀಡಾಂಗಣದಲ್ಲಿನ ಸ್ಯಾರಿ ಸಂತೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿದರು
ದೊಡ್ಡಬಳ್ಳಾಪುರ ಭಗತ್ ಸಿಂಗ್ ಕ್ರೀಡಾಂಗಣದಲ್ಲಿನ ಸ್ಯಾರಿ ಸಂತೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿದರು   

ದೊಡ್ಡಬಳ್ಳಾಪುರ: ನೇಕಾರಿಕೆ ಉಳಿವಿಗೆ ಸಂತೆ ಮಾದರಿ ಮಾರುಕಟ್ಟೆ ಅಗತ್ಯ. 2028ರ ಬಳಿಕ ಬಿಜೆಪಿ ಸರ್ಕಾರ ರಚನೆಯಾಗಿ ಜವಳಿ ಉದ್ಯಮಕ್ಕೆ ಗುಜರಾತ್ ಮಾದರಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದರು.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 'ಸ್ಯಾರಿ ಸಂತೆ' ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಸ್ವದೇಶಿ ಪರಿಕಲ್ಪನೆಗೆ ಪೂರಕವಾಗಿ ದೇಸಿ ಉದ್ಯಮಗಳನ್ನು ಉತ್ತೇಜಿಸಬೇಕಿದೆ. ನೇಕಾರರಿಗೆ ನೆರವಾಗುವ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಕಸ ವಿವಾದ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸ್ಥಳೀಯ ಶಾಸಕ, ಬಿಜೆಪಿ ಕಚೇರಿ ಮುಂದೆ ಕಸ ಸುರಿಯುವುದಾಗಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಸ ವಿಲೇವಾರಿಯಲ್ಲಿ ಅಸಮರ್ಥರಾಗಿರುವ ಅವರು, ಕಸ ತಂದು ಸುರಿಯಿರಿ ಎಂದೇ ನಾವು ಹೇಳಿದ್ದೇವೆ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

ಗ್ರಾಮ ವಾಸ್ತವ್ಯದ ನೆನಪು: ಕಂದಾಯ ಸಚಿವರಾಗಿದ್ದ ತಮ್ಮ ಮೊದಲ ಗ್ರಾಮ ವಾಸ್ತವ್ಯ ತಾಲ್ಲೂಕಿನ ಹೊಸಹಳ್ಳಿಯಲ್ಲಿ ನಡೆಸಿದ ನೆನಪು ಮಾಡಿಕೊಂಡ ಅವರು, ಆಗ ಬಡವರಿಗೆ ನಿವೇಶನ ನೀಡುವ ಭರವಸೆ ನೀಡಿದ್ದಾಗಿ ಹೇಳಿದರು. ಆದರೆ, ಪ್ರಸಕ್ತ ಸರ್ಕಾರ ಇನ್ನೂ ಆ ನಿವೇಶನಗಳನ್ನು ಬಿಡುಗಡೆ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ನೇಕಾರರ ಉಳಿವಿಗೆ ಅವರ ಉತ್ಪನ್ನಗಳನ್ನು ನಾವೇ ಖರೀದಿಸಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಳಕಲ್ ಸೀರೆ ಖರೀದಿಸುವ ಮೂಲಕ ನೇಕಾರರಿಗೆ ಸ್ಫೂರ್ತಿ ನೀಡಿದ್ದಾರೆ. ಪಾರಂಪರಿಕ ಕಸುಬುಗಳಿಗೆ ನಾವೇ ಗ್ರಾಹಕರಾಗಬೇಕು. ನೇಕಾರರಿಗಾಗಿ ಪ್ರತ್ಯೇಕ ಜವಳಿ ಪಾರ್ಕ್ ಸ್ಥಾಪಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರ ಸಾಹಿತಿ ನಾಗಾರ್ಜುನ ಶರ್ಮ, ಕ್ರಿಕೆಟಿಗ ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಸಂತೆಗೆ ಹಲವು ರೀತಿ ಆಕ್ಷೇಪ

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ 'ಸ್ಯಾರಿ ಸಂತೆ 2026' ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ಸ್ಥಳೀಯ ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ದೊಡ್ಡಬಳ್ಳಾಪುರ ಸೀರೆಗಳಿಗೆ ಬ್ರ್ಯಾಂಡ್ ಮೌಲ್ಯ ತರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಂತೆಗೆ ಅಪಾರ ಜನ ಸಾಗರ ಹರಿದು ಬಂದಿತ್ತು. ಸೂರತ್ ಸೀರೆಗಳ ಮಾರಾಟಕ್ಕೆ ಆಕ್ಷೇಪ: ಸಂತೆಯಲ್ಲಿ ಸ್ಥಳೀಯ ನೇಕಾರರ ಉತ್ಪನ್ನಗಳ ಜತೆಗೆ ಸೂರತ್‌ನಿಂದ ಆಮದಾದ ಸೀರೆಗಳೂ ಮಾರಾಟವಾಗಿರುವುದು ನೇಕಾರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ‘ದೊಡ್ಡಬಳ್ಳಾಪುರ ನೇಕಾರರಿಗೆ ಸೂರತ್ ಸೀರೆಗಳ ಮಾರುಕಟ್ಟೆಯೇ ಮಾರಕವಾಗಿದೆ. ಮುಂದಿನ ವರ್ಷಗಳಲ್ಲಿ ನಡೆಯುವ ಸ್ಯಾರಿ ಸಂತೆಯಲ್ಲಿ ಸ್ಥಳೀಯ ನೇಕಾರರ ಉತ್ಪನ್ನಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಬೇಕು. ಹೊರ ಊರಿನ ಬಟ್ಟೆಗಳಿಗೆ ಅವಕಾಶ ನೀಡಬಾರದು’ ಎಂದು ಒತ್ತಾಯ ಕೇಳಿ ಬಂದಿದೆ. ವಿಚಾರ ಸಂಕಿರಣದ ಕೊರತೆ: ಸಂತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಿದಷ್ಟು ಮಹತ್ವವನ್ನು ನೇಕಾರಿಕೆ ಕುರಿತ ವಿಚಾರ ಸಂಕಿರಣಗಳಿಗೆ ನೀಡಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ನೇಕಾರಿಕೆ ಇತಿಹಾಸ ಪ್ರಸ್ತುತ ಸಮಸ್ಯೆ ಮತ್ತು ಪರಿಹಾರ ದೊಡ್ಡಬಳ್ಳಾಪುರ ಸೀರೆ ಬ್ರ್ಯಾಂಡ್ ಆಗುವ ಸಾಧ್ಯತೆ ಕುರಿತು ವಿಷಯ ಪರಿಣಿತರೊಂದಿಗೆ ನೇಕಾರರ ಸಂವಾದ ನಡೆಯಬೇಕಿತ್ತು’ ಎಂದು ನೇಕಾರರು ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ನೇಕಾರರ ಭಾಗವಹಿಸುವಿಕೆ ಆರೋಪ: ಸ್ಯಾರಿ ಸಂತೆಯು ಎಲ್ಲ ನೇಕಾರರನ್ನು ಒಳಗೊಳ್ಳದೆ ಒಂದು ನಿರ್ದಿಷ್ಟ ವಲಯ ಅಥವಾ ಪಕ್ಷಕ್ಕೆ ಸೀಮಿತಗೊಳಿಸಿ ನಡೆಸಲಾಗಿದೆ ಎಂಬ ಆರೋಪವೂ ನೇಕಾರ ವಲಯದಲ್ಲಿ ಕೇಳಿ ಬಂದಿದೆ. ಸಂತೆ ಉದ್ದೇಶ ಈಡೇರಬೇಕಾದರೆ ಮುಂದಿನ ಬಾರಿ ಎಲ್ಲ ನೇಕಾರರನ್ನು ಒಳಗೊಂಡಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.