ADVERTISEMENT

ಶಾಲೆಯೊಳಗೆ ಮದ್ಯದ ಬಾಟಲಿ ಬೀಸಾಡತಾರೆ.. ಕೊಡಿಗೇಹಳ್ಳಿ ಶಾಲೆಯ ವಿದ್ಯಾರ್ಥಿಗಳು ದೂರು

ತರಗತಿ ವೇಳೆ ಕಿಟಕಿಯಿಂದ ಕಲ್ಲು ತೂರಾಟ । ಕೊಡಿಗೇಹಳ್ಳಿ ಶಾಲಾ ವಿದ್ಯಾರ್ಥಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 2:51 IST
Last Updated 1 ಜನವರಿ 2026, 2:51 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ವಿವಿಧ ಸಮಸ್ಯೆಗಳ ಮನವಿ ಪತ್ರವನ್ನು ಪಿಡಿಒ ಸೌಮ್ಯ ಅವರಿಗೆ ಸಲ್ಲಿಸಿದರು  
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ವಿವಿಧ ಸಮಸ್ಯೆಗಳ ಮನವಿ ಪತ್ರವನ್ನು ಪಿಡಿಒ ಸೌಮ್ಯ ಅವರಿಗೆ ಸಲ್ಲಿಸಿದರು     

ದೊಡ್ಡಬಳ್ಳಾಪುರ: ‘ಶಾಲಾ ಕೊಠಡಿಯ ಒಳಗೆ ಧೂಮಪಾನ ಮತ್ತು ಮದ್ಯಪಾನ ಮಾಡಿದ ಬಾಟಲಿಗಳನ್ನು ಬಿಸಾಡುತ್ತಾರೆ. ಶಾಲೆಗೆ ಬಂದಾಗ ಗ್ಲಾಸ್ ಚೂರುಗಳು ಕಾಲಿಗೆ ಚುಚ್ಚುತ್ತವೆ, ಶಾಲೆಯ ಸುತ್ತಾ ಮುತ್ತ ತಂಬಾಕು ಮಾರಾಟ ಮಾಡಲಾಗುತ್ತಿದೆ...

-ಹೀಗೆ ಅಳಲು ತೋಡಿಕೊಂಡಿದ್ದ ಕೊಡಿಗೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು.

ಗ್ರಾಮ ಪಂಚಾಯಿತಿ, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಸಿ.ಎಂ.ಸಿ.ಎ ಸಂಸ್ಥೆ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಶಾಲಾ ಆವರಣ ಹಾಗೂ ಕೊಠಡಿಯಲ್ಲಿನ ಅವ್ಯವಸ್ಥೆಗಳನ್ನು ತಡೆಯುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ADVERTISEMENT

ಶಾಲೆಯ ಹೊರಗೆ ಸ್ವಚ್ಛತೆ ಇಲ್ಲ. ಶಾಲೆಯ ಕಿಟಕಿಗಳಿಗೆ ತರಗತಿ ನಡೆಯುವ ಸಂದರ್ಭದಲ್ಲಿ ಹೊರಗಿನಿಂದ ಕಲ್ಲು ತೂರಾಟ ನಡೆಸುತ್ತಾರೆ. ಸಮಾಜ ವಿಜ್ಞಾನ ಭಾಗ-2 ಪುಸ್ತಕ ನಮಗೆ ಸಿಕ್ಕಿಲ್ಲ, ಆಟದ ಮೈದಾನವಿಲ್ಲ, ಶಾಲೆಯ ತಡೆಗೋಡೆ, ಶಾಲೆಯ ಶೌಚಾಲಯದ ಸ್ವಚ್ಛತೆ ಇಲ್ಲದಾಗಿದೆ, ಶಾಲೆಯ ಕೊಠಡಿ ಬಾಗಿಲು ಮರಿದು ಬಿದ್ದಿವೆ, ದೈಹಿಕ ಶಿಕ್ಷಣ ಮತ್ತು ಹಿಂದಿ ಭಾಷೆಗೆ ಶಿಕ್ಷಕರು ಇಲ್ಲ, ಕಸವನ್ನು ಸಂಗ್ರಹಿಸಲು ವಾಹನ ಬರುವುದಿಲ್ಲ, ಬೀದಿ ನಾಯಿಗಳ ಕಾಟ ಸೇರಿದಂತೆ ಹಲವಾರು ಸಮಸ್ಯೆಗಳ ಪಟ್ಟಿ ಮಾಡಿದರು.

ಇದೇ ಸಭೆಯಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಮಕ್ಕಳ ಧ್ವನಿ ಪೆಟ್ಟಿಗೆ ಚೀಟಿಯಲ್ಲಿ ಬರೆದು ಹಾಕಿದ್ದರು. ಇದನ್ನು ವೇದಿಕೆಯ ಮೇಲೆ ಇದ್ದವರು ಚೀಟಿಗಳನ್ನು ತೆರೆದು ಎಲ್ಲರ ಮುಂದೆ ಓದಿದರು.

ಮಕ್ಕಳು ಕೇಳಿದ ಸಮಸ್ಯೆಗಳಿಗೆ ಒಂದಾದ ನಂತರ ಒಂದರಂತೆ ಎಲ್ಲದಕ್ಕೂ ಅಧಿಕಾರಿಗಳು ಹಾಗೂ ಸದಸ್ಯರು ಉತ್ತರ ನೀಡಿದರು. ಸಭೆಯಲ್ಲಿ ಮಕ್ಕಳು ಲಿಖಿತವಾಗಿ ನೀಡಿರುವ ಸಮಸ್ಯೆಗಳ ಪರಹಾರಕ್ಕೆ ಮೇಲಾಧಿಕಾರಿಗಳ ಗಮನಕ್ಕು ತರಲಾಗುವುದು ಎಂದು ಪಂಚಾಯಿಯತಿ ಅಭಿವೃದ್ಧಿ ಅಧಿಕಾರಿ ಸೌಮ್ಯ ಹೇಳಿದರು.

ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿ ಮಾತನಾಡಿ, ಮಕ್ಕಳು ಹೇಳಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ದೊರೆಯುವಂತಹ ಇಂತಹ ಸಭೆ ಮತ್ತು ಅವರ ಸಮಸ್ಯೆಗಳಿಗೆ ನೇರವಾಗಿ ಉತ್ತರ ದೊರಕಲು ಅವಕಾಶ ದೊರೆಯುತ್ತದೆ ಎಂದರು.

ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ,  ಮಕ್ಕಳ ಸಹಾಯವಾಣಿ ಮೇಲ್ವಿಚಾರಕಿ ಸೌಮ್ಯ, ಕೊಡಿಗೆಹಳ್ಳಿ ವ್ಯಾಪ್ತಿಯ ಸಿ.ಆರ್.ಪಿ ಮುತ್ತುರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಆರ್‌.ಚೇತನ, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ನವೀನ್ ಕುಮಾರ್, ಸ್ವಯಂ ಸೇವಕಿ ಲಾವಣ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.