ADVERTISEMENT

ದೊಡ್ಡಬಳ್ಳಾಪುರ | ಮೊದಲ ದಿನವೇ 111 ವಿದ್ಯಾರ್ಥಿಗಳ ಗೈರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:52 IST
Last Updated 1 ಮಾರ್ಚ್ 2026, 4:52 IST
ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸು ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ  ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು
ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸು ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ  ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಸುಗಮವಾಗಿ ಆರಂಭಗೊಂಡಿದೆ. ಮೊದಲ ದಿನದ ಕನ್ನಡ ವಿಷಯ ಪರೀಕ್ಷೆಯಲ್ಲಿ 111 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ. ಬೆಳಿಗ್ಗೆ 9 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ತಲುಪಲು ಸಾರಿಗೆ ಸಂಸ್ಥೆಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ನಡೆದ ಕನ್ನಡ ಭಾಷೆ ಪರೀಕ್ಷೆಗೆ ಒಟ್ಟು 9,569 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ 9,458 ವಿದ್ಯಾರ್ಥಿಗಳು ಹಾಜರಾಗಿ ಒಟ್ಟು 111 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಎನ್.ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.

ADVERTISEMENT

ಪರೀಕ್ಷಾ ಕೇಂದ್ರಗಳ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದಂತೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಪ್ರಥಮ ಭಾಷೆಗೆ ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 638 ವಿದ್ಯಾರ್ಥಿಗಳು, ಸರ್ಕಾರಿ ಪದವಿ ಪೂರ್ವ ಕಾಲೇಜು 661 ವಿದ್ಯಾರ್ಥಿಗಳು, ದೇವರಾಜ ಅರಸು ಪದವಿ ಪೂರ್ವ ಕಾಲೇಜು 530 ಕೇಂದ್ರದಲ್ಲಿ ಒಬ್ಬರು ಸೇರಿ ಮೂರು ಪರೀಕ್ಷಾ ಕೇಂದ್ರಗಳಿಂದ 1,829 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಮೂರು ಕೇಂದ್ರಗಳಿಂದ ಒಟ್ಟು 17 ವಿದ್ಯಾರ್ಥಿಗಳು ಗೈರಾಗಿದ್ದರು.

ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಮತ್ತು ಪ್ರವೇಶ ಪತ್ರ ಪರಿಶೀಲನೆ ಮಾಡಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು. ವಿದ್ಯಾರ್ಥಿಗಳಿಗೆ ಶೂ, ಬ್ಲೇಸರ್, ಕೈಗಡಿಯಾರ ಧರಿಸದಂತೆ ನಿರ್ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.