
ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಯಾರಿ ಸಂತೆಯಲ್ಲಿ ನೆರೆದಿರುವ ಜನರು
ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ನೇಕಾರರು ನೇಯ್ದಿರುವ ಸೀರೆಗಳನ್ನು ಮಾತ್ರ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಹಾಗೂ ಇಲ್ಲಿನ ಸೀರೆಗಳ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸುವ ‘ಸ್ಯಾರಿ ಸಂತೆ’ ಶುಕ್ರವಾರದಿಂದ ಆರಂಭವಾಗಲಿದೆ. ಈ ಸಂತೆ ಭಾನುವಾರದವರೆಗೆ ನಡೆಯಲಿದೆ.
ನಗರದಲ್ಲಿರುವ ನೇಕಾರರಿಗೆ ಮಾರುಕಟ್ಟೆ ದೊರಕಿಸುವ ಹಾಗೂ ಇಲ್ಲಿ ನೇಯಲಾಗುವ ಸೀರೆಗಳನ್ನು ಹೊರಗಿನವರಿಗೆ ಪರಿಚಯಿಸಲು ಇದೇ ಪ್ರಥಮ ಬಾರಿಗೆ ಶಾಸಕ ಧೀರಜ್ ಮುನಿರಾಜು ಅವರು ಸ್ಯಾರಿ ಸಮಿತಿಯಿಂದ ಸ್ಯಾರಿ ಸಂತೆ ಏರ್ಪಡಿಸಿದ್ದಾರೆ.
ಕ್ರೀಡಾಂಗಣದಲ್ಲಿ ಸೀರೆಗಳನ್ನು ಮಾರಾಟ ಮಾಡುವ ನೇಕಾರರಿಗೆ 72 ಮಳಿಗೆಗಳನ್ನು ಉಚಿತವಾಗಿ ನೀಡಲಾಗಿದೆ. 3 ಮಳಿಗೆಗಳಲ್ಲಿ ಸರ್ಕಾರದ ಜವಳಿ ಇಲಾಖೆ ಹಾಗೂ ಬ್ಯಾಂಕ್‌ಗಳಿಂದ ನೇಕಾರರಿಗೆ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿಗೆ ಮೀಸಲಿಡಲಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಸೀರೆಗಳ ಮಾರಾಟ ಪ್ರಾರಂಭವಾಗಿದ್ದು, ನೂರಾರು ಜನ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಸೀರೆ ಖರೀದಿ ಹಾಗೂ ವಿವಿಧ ಮಾದರಿಯ ಸೀರೆಗಳ ಕುರಿತು ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸೀರೆ ಸಂತೆಗೆ ಬರುವವರಿಗೆ ಮನರಂಜನೆಗಾಗಿ ಶನಿವಾರ ಸಂಜೆ ಗಂಗಾವತಿ ಪ್ರಾಣೇಶ್, ಕಾಮಿಡಿ ಕಿಲಾಡಿಗಳು ಕಲಾ ತಂಡದಿಂದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಭಾನುವಾರ ಸಂಜೆ ರಘು ದೀಕ್ಷಿತ್ ತಂಡದವರಿಂದ ಸಂಗೀತ ಸಂಜೆ, ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮ ಸೇರಿದಂತೆ ಇತರೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.