ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಹೂವು, ಹಣ್ಣುಗಳ ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮ ಮಾತ್ರ ಜೋರಾಗಿಯೇ ಇತ್ತು.
ಮಹಾಲಕ್ಷ್ಮಿಯ ಕಳಶ ಸ್ಥಾಪಿಸಿ ತಳಿರು ತೋರಣ ಹೂಗಳಿಂದ ಸಿಂಗರಿಸಿದ ಲಕ್ಷ್ಮಿ ಮೂರ್ತಿಗಳಿಗೆ ಅಲಂಕಾರ ಮಾಡಿ ಮಹಿಳೆಯರು ಪೂಜೆ ನೆರವೇರಿಸಿದರು. ಕಳಸಕ್ಕೆ ಲಕ್ಷ್ಮಿ ಮುಖವಾಡ ಹಾಕಿ ಅಲಂಕಾರಿಕ ಆಭರಣ ಧರಿಸಿ, ಬಾಳೆಕಂದು, ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಹರಿಶಿನ ಕುಂಕುಮ ನೀಡಿ ಸತ್ಕರಿಸಲಾಯಿತು.
ನಗರದ ಕನಕದಾಸನಗರದ ಲಕ್ಷ್ಮಿ ದೇವಾಲಯದಲ್ಲಿ ದೇವಾಲಯ ಅಭಿವೃದ್ಧಿ ಮಂಡಲಿ ಟ್ರಸ್ಟ್ ಮತ್ತು ವರಸಿದ್ಧಿ ವಿನಾಯಕ ಗೆಳೆಯರ ಬಳಗದ ಸಹಯೋಗದಲ್ಲಿ ದೇವಾಲಯದಲ್ಲಿ ಲಕ್ಷ್ಮಿದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಕನಸವಾಡಿಯಲ್ಲಿನ ಕೊಂಡಂದಮ್ಮ (ಈರಮಾಸ್ತಮ್ಮ) ದೇವಾಲಯ, ನಗರದ ಕಾಳಿಕಾ ಕಮಟೇಶ್ವರ, ಅಭಯ ಚೌಡೇಶ್ವರಿ, ಗಂಗಮ್ಮ, ಮುತ್ಯಾಲಮ್ಮ ಮುಂತಾದ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.