
ದೊಡ್ಡಬಳ್ಳಾಪುರ: ಜಿಲ್ಲಾ ಪಂಚಾಯತಿ, ಜಿಲ್ಲಾ ಸೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ನಗರಸಭೆ ಹಾಗೂ ಯುವ ಸಂಚಲನ ಸಹಯೋಗದಲ್ಲಿ ಸ್ವಾಮಿವಿವೇಕಾನಂದರ ಜಯಂತಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಶ್ರಮದಾನ ಮತ್ತು ಮತದಾರರ ದಿನಾಚರಣೆ ಜಾಗೃತಿ ಜಾಥಾ ಶನಿವಾರ ನಡೆಯಿತು.
ನಗರದ ಪ್ರವಾಸಿ ಮಂದಿರದ ಬಳಿಯಿಂದ ಭಗತ್‌ಸಿಂಗ್ ಕ್ರೀಡಾಂಗಣದವರೆಗೆ ಮತದಾನದ ಮಹತ್ವ ಕುರಿತ ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ನೂರಾರು ಜನ ವಿದ್ಯಾರ್ಥಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ ಜಾಥಾಗೆ ಚಾಲನೆ ನೀಡಿ, 18 ವರ್ಷ ತುಂಬಿದ ಎಲ್ಲಾ ಅರ್ಹರು ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಜನರಿಗೆ ಮತದಾನದ ಬೆಲೆ ತಿಳಿಯುತ್ತಿಲ್ಲ. ಮತದಾನ ಸಂವಿಧಾನದ ಮೂಲಭೂತ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಬೇಕಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ಸದೃಢ ದೇಶ ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹ್ವದ್ದಾಗಿದೆ. ಯುವ ಜನತೆ ದೇಶದ ಬಗ್ಗೆ ಕಾಳಜಿ ವಹಿಸಬೇಕಿದೆ. ಈ ದಿಸೆಯಲ್ಲಿ ಮತದಾನದ ಪ್ರಾಮುಖ್ಯತೆ ಅರಿಯಬೇಕಿದೆ. ಯುವ ಶಕ್ತಿಗೆ ಪ್ರೇರಕರಾದ ಸ್ವಾಮಿವಿವೇಕಾನಂದರ ಜಯಂತಿ ಅಂಗವಾಗಿ ಶ್ರಮದಾನದ ಮಾಡಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಿ. ಶ್ರೀನಿವಾಸ, ಯುವ ಸಂಚಲನ ಅಧ್ಯಕ್ಷ ಚಿದಾನಂದ ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.