
ದೊಡ್ಡಬಳ್ಳಾಪುರ: ನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ 52ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಮಂಡಲ ಪೂಜಾ ಕಾರ್ಯುಕ್ರಮದ ಅಂಗವಾಗಿ ದೇವಾಲಯದಲ್ಲಿ ಶ್ರೀಗಣ ಹೋಮ ನಡೆಯಿತು. ಅಯ್ಯಪ್ಪಸ್ವಾಮಿ, ಗಣೇಶ ಹಾಗೂ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಯ್ಯಪ್ಪ ವ್ರತಧಾರಿಗಳಿಂದ ಸಾಮೂಹಿಕ ಭಜನೆ ನಡೆಯಿತು.
ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಕಾರ್ಯಗಳಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ದೇಶದಲ್ಲಿ ಹಲವಾರು ಸಂಸ್ಕೃತಿ, ಸಂಪ್ರದಾಯಗಳ ಆಚರಣೆಗಳಿವೆ. ಇಂತಹ ಆಚರಣೆಗಳು ಮಾನವೀಯ ಮೌಲ್ಯಗಳನ್ನು ಬಿಂಬಿಸಿ, ಸಮಾಜವನ್ನು ಒಗ್ಗೂಡಿಸುತ್ತವೆ ಎಂದರು.
ಧಾರ್ಮಿಕ ಆಚರಣೆಗಳ ಮೇಲೆ ನಮ್ಮ ನಂಬಿಕೆ, ಶ್ರದ್ದೆಗಳು ಜಗತ್ತಿನಲ್ಲಿಯೇ ವಿಶೇಷವಾಗಿವೆ. ಜೀವನದ ಯಶಸ್ಸು ಬರೀ ಹಣದಿಂದ ಸಾಧ್ಯವಿಲ್ಲ. ಸೇವಾಕಾರ್ಯ ಮಾಡುವುದು ಸಹ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವ ಹಾದಿಯಾಗಿದೆ. 84ಲಕ್ಷ ಜೀವ ರಾಶಿಯಲ್ಲಿ ಮಾನವ ಜನ್ಮ ಮಾತ್ರ ದೇವತಾರಾಧನೆಯೊಂದಿಗ ಮೋಕ್ಷ ಪಡೆಯುತ್ತದೆ. ಇಂತಹ ಪವಿತ್ರ ಜನ್ಮವನ್ನು ಹಾನಿ ಮಾಡಿಕೊಳ್ಳದಿರಿ ಎಂದು ದಾಸರೇ ಹೇಳಿದ್ದಾರೆ. ಪರೋಪಕಾರದ ಮೂಲಕ ನಮ್ಮ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹದೇವಯ್ಯ, ಕಾರ್ಯಗದರ್ಶಿ ಬಿ.ವಿ.ಬಸವರಾಜು, ಸಮಿತಿ ಸದಸ್ಯರು ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದರು.
ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವದಲ್ಲಿ ವೀರಭದ್ರ, ವೀರಗಾಸೆ ಕುಣಿತ, ಕೇರಳದ ಚಂಡೆ ವಾದ್ಯ, ದೇವರ ವೇಷಭೂಷಣಗಳ ಪ್ರದರ್ಶನದ ಕಲಾನೃತ್ಯಗಳೊಂದಿಗೆ ಅಯ್ಯಪ್ಪಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.