ADVERTISEMENT

ದೊಡ್ಡಬಳ್ಳಾಪುರ| ಶುದ್ಧೀಕರಣ ಘಟಕ ಸ್ಥಾಪನೆಗೆ ಆಗ್ರಹ: ಉಪವಾಸ ಸತ್ಯಾಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:38 IST
Last Updated 23 ಜನವರಿ 2026, 5:38 IST
<div class="paragraphs"><p>ದೊಡ್ಡಬಳ್ಳಾಪುರ ತಾಲ್ಳೂಕು ಕಚೇರಿ ಮುಂದೆ ಗುರುವಾರ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ</p></div>

ದೊಡ್ಡಬಳ್ಳಾಪುರ ತಾಲ್ಳೂಕು ಕಚೇರಿ ಮುಂದೆ ಗುರುವಾರ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ

   

ದೊಡ್ಡಬಳ್ಳಾಪುರ: ಒಳಚರಂಡಿ ಕೊಳಚೆ ನೀರಿನ ಮೂರನೇ ಹಂತದ ಶುದ್ಧೀಕರಣ ಘಟಕ ಸ್ಥಾಪನೆಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಗುರುವಾರ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಯಿತು.

ನಗರಸಭೆ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ಕೊಳಚೆ ನೀರು ಶುದ್ಧೀಕರಿಸಿ ಬಿಡುವಂತೆ ಏಳು ವರ್ಷದಿಂದಲೂ ಹೋರಾಟ ಮಾಡಲಾಗುತ್ತಿದೆ. ಪ್ರತಿ ಬಾರಿ ಹೋರಾಟ ಆರಭಿಸಿದಾಗಲೂ ಅಧಿಕಾರಿಗಳು, ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡುತ್ತಲೇ ನಮ್ಮನ್ನು ವಂಚಿಸಸಿದ್ದಾರೆ ಎಂದು ಸತ್ಯಾಗ್ರಹನಿರತರು ಆಕ್ರೋಶ ವ್ಯಕ್ತಪಡಿಸಿರು.

ADVERTISEMENT

ಕೊಳಚೆ ನೀರಿನಿಂದ ಮಜಾರಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿಗಳ ಸುಮಾರು 50 ಸಾವಿರ ಜನರ ಆರೋಗ್ಯ ಹದಗೆಟ್ಟರೂ ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ನೆಪವನ್ನೇ ಹೇಳುತ್ತಾ ಬರಲಾಗುತ್ತಿದೆ. ಅಧಿಕಾರಿಗಳು ಸುಳ್ಳು ಭರಸವೆ ನೀಡಿ ಹೋರಾಟದ ದಿಕ್ಕುತಪ್ಪಿಸುತ್ತಿದ್ದಾರೆ. ಚಿಕ್ಕತುಮಕೂರು ಗ್ರಾಮದಲ್ಲಿ ಒಂದು ರಾತ್ರಿ ವಾಸ ಮಾಡಿದರೆ ಮಾತ್ರ ಕೊಳಚೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ ಎಂದು ಹೋರಾಟ ಸಮಿತಿಯ ವಸಂತಕುಮಾರ್‌, ಆದಿತ್ಯನಾಗೇಶ್‌, ರಮೇಶ್‌, ಕಾಳೇಗೌಡ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸತ್ಯಾಗ್ರಹವನ್ನು ತಾಲ್ಲೂಕು ಕಚೇರಿ ಬಾಗಿಲಿನಿಂದ ಬೇರೆಡೆಗೆ ಸ್ಥಳಾಂತರ ಮಾಡಿ ಎಂದ ಅಧಿಕಾರಿಗಳ ಸತ್ಯಾಗ್ರಹನಿರತರು ವಿರುದ್ಧ ಹರಿಹಾಯ್ದರು.

ಸಾರ್ವಜನಿಕರಿಗೆ ತೊಂದರೆಯಾಗುವ ಪರಿಣಾಮದಿಂದ ಧರಣಿಯನ್ನು ತಾಲ್ಲೂಕು ಕಚೇರಿ ಬಾಗಿಲಿಗೆ ಬದಲಾಗಿ ಬೇರೆಡೆ ನಡೆಸುವಂತೆ ತಹಶೀಲ್ದಾರ್‌ ಡಾ.ಮಲ್ಲಪ್ಪ ಕೆ.ಯರಗೋಳ ಅವರು ಹೇಳಿದ ಮಾತಿಗೆ ಆಕ್ರೋಶಗೊಂಡ ಧರಣಿ ನಿರತರು ‘ದಶಕಗಳಿಂದಲೂ ತಾಲ್ಲೂಕಿನ ಎಲ್ಲಾ ಹೋರಾಟಗಳು, ಧರಣಿಗಳು ನಡೆಯುತ್ತಿರುವುದೇ ತಾಲ್ಲೂಕು ಕಚೇರಿ ಮುಂದೆ. ಆದರೆ ಯಾರಿಗೂ ಇಲ್ಲದ ನಿಯಮ ನಮ್ಮ ಶಾಂತಿಯುತ ಹೋರಾಟಕ್ಕೆ ಮಾತ್ರ ಅನ್ವಯಿಸುವುದು ತಪ್ಪು. ಹೋರಾಟ ನಮ್ಮ ಹಕ್ಕು ಇದನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಕೊಳಚೆ ನೀರು ಶುದ್ಧೀಕರಣಕ್ಕಾಗಿ ಖಾಸ್‌ಬಾಗ್‌ ಸಮೀಪ ಎರಡು ಎಕರೆ ಜಮೀನು ಗುರುತಿಸಲಾಗಿದೆ. ತಾಲ್ಲೂಕು ಆಡಳಿತ ಈಗಾಗಲೇ ಇದನ್ನು ನಗರಸಭೆಗೆ ಹಸ್ತಾಂತರಿಸಲು ಅಗತ್ಯ ಕ್ರಮವನ್ನು ಕೈಗೊಂಡಿರುವ ಪತ್ರ ವ್ಯವಹಾರಗಳನ್ನು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌ ಧರಣಿ ನಿರತರ ಗಮನಕ್ಕೆ ತಂದರು.

ಪೌರಾಯುಕ್ತರ ಮಾತಿಗೆ ಕೆರಳಿದ ಧರಣಿ ನಿರತರು ‘ಸುಳ್ಳು ಪತ್ರ ವ್ಯವಹಾರಗಳನ್ನು ಏಳು ವರ್ಷಗಳಿಂದ ನೋಡಿದ್ದೇವೆ. ಚುನಾವಣೆ ಬಹಿಷ್ಕಾರ ಹಾಕಿದಾಗ ಇಂತಹದ್ದೇ ಪತ್ರದಲ್ಲಿ 4 ಎಕರೆ ಜಮೀನು ಶುದ್ದೀಕರಣ ಘಟಕ ಸ್ಥಾಪನೆಗೆ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಪತ್ರ ತೋರಿಸಿ ಹೋರಾಟದ ಧಿಕ್ಕುತಪ್ಪಿಸಿದ್ದೀರಿ. ಈಗ ಗಣರಾಜ್ಯೋತ್ಸವ ದಿನದಂದು ಕಪ್ಪು ಭಾವುಟ ಹಾರಿಸುವುದನ್ನು ತಪ್ಪಿಸುವ ಸಲುವಾಗಿ ಹೊಸ ನಾಟಕ ಆರಂಭಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪವಾಸ ಸತ್ಯಾಗ್ರಹ ಧರಣಿಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸುವ ಭರವಸೆಯನ್ನು ತಹಶೀಲ್ದಾರ್‌ ನೀಡಿದ್ದಾರೆ. ಆದರೆ ಹೋರಾಟ ಸಮಿತಿಯಿಂದ ರಾತ್ರಿ ಹಗಲು ನಿರಂತರ ಉಪವಾಸ ಸತ್ಯಾಗ್ರಹ ಮುಂದುವರೆದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.