ಪ್ರಾತಿನಿಧಿಕ ಚಿತ್ರ
ಪ್ರಜಾವಾಣಿ ಚಿತ್ರ: ಭಾವು ಪತ್ತಾರ
ಆನೇಕಲ್: ತಾಲ್ಲೂಕಿನಲ್ಲಿ ಕಳೆದ ಐದು ತಿಂಗಳಲ್ಲಿ ಕ್ಷಲಕ ಕಾರಣ, ವಿವಾಹೇತರ ಸಂಬಂಧ ಮತ್ತು ಶೀಲ ಶಂಕಿಸಿ ಪತಿ, ಪತ್ನಿಯನ್ನೇ ಹತ್ಯೆ ಮಾಡಿದ ಏಳು ಪ್ರಕರಣ ದಾಖಲಾಗಿವೆ.
ದಂಪತಿ ವೈವಾಹಿಕ ಮತ್ತು ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ ಆಗುತ್ತಿರುವುದರಿಂದ ಮಕ್ಕಳು ಅನಾಥರಾಗಿ ಆರೈಕೆ ಇಲ್ಲದೆ ಬಡವಾಗುತ್ತಿವೆ. ಪೋಷಕರ ಆಶ್ರಯ ಕಳೆದುಕೊಂಡ ಮಕ್ಕಳ ಭವಿಷ್ಯ ಮಂಕಾಗಿದೆ.
ಜನವರಿಂದ ಜೂನ್ ವರೆಗೆ ತಾಲ್ಲೂಕಿನ ಸೂರ್ಯಸಿಟಿ, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಮತ್ತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎರಡು ಇಂತಹ ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಐದು ಪ್ರಕರಣ ವಲಸಿಗರಿಗೆ ಸಂಬಂಧಿಸಿವೆ.
ಈ ಪೈಕಿ ಐದು ಕೊಲೆ ಪ್ರಕರಣ ಅನೈತಿಕ ಸಂಬಂಧ ಮತ್ತು ಶೀಲ ಶಂಕೆಯಿಂದ ನಡೆದಿವೆ. ಮತ್ತೊಂದು ಪ್ರಕರಣ ಕುಡಿದ ಮತ್ತಿನಲ್ಲಿ ನಡೆದಿದೆ.
ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧ ಕಾರಣ ಎನ್ನುತ್ತಾರೆ ಪೊಲೀಸರು. ಈ ಪೈಕಿ ಒಂದು ಪ್ರಕರಣ ಹೊರತುಪಡಿಸಿದರೆ ಎಲ್ಲಾ ಪ್ರಕರಣಗಳಲ್ಲಿ ಹೊರ ರಾಜ್ಯಗಳಿಂದ ವಲಸೆ ಬಂದವರೇ ಆರೋಪಿಗಳು ಮತ್ತು ಸಂತ್ರಸ್ತರು.
ತಂದೆಯಿಂದ ಬರ್ಬರವಾಗಿ ತಾಯಿ ಹತ್ಯೆಯನ್ನು ಕಂಡ ಮಕ್ಕಳು ತಂದೆ ಜೈಲು ಕಂಬಿಗಳ ಹಿಂದೆ ಸೇರುವುದನ್ನೂ ಕಂಡು ಆತಂಕದಲ್ಲಿ ಕಳೆಯುತ್ತಿದ್ದಾರೆ.
ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ದಂಪತಿಗೆ ಪುಟ್ಟ ಮಗು ಇತ್ತು. ಆ ಮಗುವನ್ನು ಸಂಬಂಧಿಕರ ಮಡಿಲು ಸೇರಿದೆ. ಆದರೆ, ಹೆತ್ತವರ ಪ್ರೀತಿಯಿಂದ ವಂಚಿತವಾಗಿದೆ.
ಹೆಬ್ಬಗೋಡಿಯಲ್ಲಿ ಮಗುವಿನ ಶಾಲೆ ಮುಂಭಾಗದಲ್ಲಿಯೇ ಅದರ ತಾಯಿಯನ್ನು ತಂದೆ ಕೊಂದು ಹಾಕಿದ. ಇದನ್ನು ಕಣ್ಣಾರೆ ಕಂಡ ಎಳೆ ಮಗು ಮನಸು ಘಾಸಿಗೊಂಡಿದೆ. ಇಂತಹ ಮಕ್ಕಳು ಖಿನ್ನತೆ, ಭಯ, ಅನಿಶ್ಚಿತತೆ, ಮಾನಸಿಕ ವ್ಯಾಧಿಯಿಂದ ಬಳಲುತ್ತಿದ್ದಾರೆ.
ಆನೇಕಲ್ ತಾಲ್ಲೂಕು ಕೈಗಾರಿಕಾ ಪ್ರದೇಶದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ನೆಲಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಂಪತಿ ಕಲಹಗಳು ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಆನೇಕಲ್ ತಾಲ್ಲೂಕಿಗೆ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆ ಅವಶ್ಯಕತೆ ಇದೆ. ಇದರಿಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಮಹಿಳೆಯರ ಸಮಸ್ಯೆ ಪರಿಹರಿಸುವ ಜೊತೆಗೆ ರಕ್ಷಣೆ ಸಿಕ್ಕಿದಂತೆ ಆಗುತ್ತದೆ ಎಂದು ಮಹಿಳಾ ಹೋರಾಟಗಾರರು ಒತ್ತಾಯಿಸಿದ್ದಾರೆ.
ಈಚಿನ ದಿನಗಳಲ್ಲಿ ಪತಿಯಿಂದ ಪತ್ನಿ ಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಯನ್ನು ಮಹಿಳಾ ಆಯೋಗ, ಮಹಿಳಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರಂಭದಲ್ಲೇ ಪರಿಹಾರ ಹುಡಕಬೇಕು.ಗೌರಮ್ಮ, ಆನೇಕಲ್
ರುಂಡ ಕತ್ತರಿಸಿ ಠಾಣೆಗೆ ತಂದಿದ್ದ: ಚಂದಾಪುರ ಬಳಿಯ ಹೀಲಲಿಗೆ ಗ್ರಾಮದಲ್ಲಿ ಜೂನ್ 8ರಂದು ವ್ಯಕ್ತಿಯೊಬ್ಬ ಪತ್ನಿಯ ರುಂಡವನ್ನು ಮಚ್ಚನಿಂದ ಕತ್ತರಿಸಿ, ರುಂಡವನ್ನು ಸ್ಕೂಟರ್‌ನಲ್ಲಿಟ್ಟುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದ. ತಾನೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗಳಿದ್ದಳು. ತನ್ನ ಪತ್ನಿ ಮತ್ತು ಆಕೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ವ್ಯಕ್ತಿಯ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದ ಜಗಳ ನಡೆಯುತಿತ್ತು. ಇದರಿಂದ ಹತ್ಯೆ ಮಾಡಿರುವುದಾಗಿ ಪತಿ ತಪ್ಪೊಪ್ಪಿಗೆ ನೀಡಿದ್ದ.
ಏಪ್ರಿಲ್ 5 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಬಾಗೇಪಲ್ಲಿಯ ಮಹಿಳೆಯನ್ನು ಪತಿ ಹತ್ಯೆ ಮಾಡಿದ್ದ.
ಮನೆ ಬಾರದ ಪತ್ನಿ ಜೀವ ತೆಗೆದ ಗಂಡ: ಮಾರ್ಚ್ 28ರಂದು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಕಾಲೊನಿಯಲ್ಲಿ ತನ್ನ ಮನೆಗೆ ಪತ್ನಿ ಬರಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಯತ್ನಿಸಿದ್ದ.
ಪತ್ನಿ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಿದ್ದರು. ಅತ್ತೆ ಮನೆಗೆ ತೆರಳಿ ಪತ್ನಿಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದ.
ಮಾರ್ಚ್ 18ರಂದು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಚಮಾನ ಹಳ್ಳಿ ಗ್ರಾಮದಲ್ಲಿ ಪತ್ನಿಯ ಶೀಲಾ ಶಂಕಿಸಿ ಪತಿ ಹತ್ಯೆ ಮಾಡಿದ್ದ.
ಮಾರ್ಚ್ 4ರಂದು ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಯ ಕೊಲೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ನಳ್ಳಿ ಗ್ರಾಮದಲ್ಲಿ ದಾಖಲಾಗಿತ್ತು. ಈ ಪ್ರಕರಣದಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ಕುಡಿದು ಪರಸ್ಪರ ಗಲಾಟೆ ಮಾಡಿಕೊಂಡು ಗಲಾಟೆಯು ವಿಕೋಪಕ್ಕೆ ತೆರಳಿ ಪತ್ನಿಯ ಕೊಲೆಯಾಗಿತ್ತು.
ಫೆ.16ರಂದು ಸರ್ಜಾಪುರ ಸಮೀಪದ ತಿಗಳ ಚೌಡದೇನಹಳ್ಳಿಯಲ್ಲಿ ಗ್ರಾಮದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಪತಿಯೇ ತಳ್ಳಿ ಕೊಲೆ ಮಾಡಿದ್ದ.
ಮಗು ಮುಂದೆಯೇ ತಾಯಿಯ ಹತ್ಯೆ: ಫೆ.6ರಂದು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಮ್ಮ ಮಗುವಿನ ಶಾಲೆಯ ಮುಂಭಾಗದಲ್ಲಿಯೇ ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಇದಕ್ಕೆ ಶೀಲ ಶಂಕೆ, ಅನುಮಾನವೇ ಕಾರಣವಾಗಿತು.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಕೊಲೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಕೊಲೆಯೊಂದ ಪರಿಹಾರ ಅಲ್ಲ. ಪತಿ ಮತ್ತು ಪತ್ನಿಯರ ನಡುವೆ ಅನ್ಯೋನ್ಯತೆ ಅತ್ಯಂತ ಅವಶ್ಯಕಭವ್ಯಾ, ಚಂದಾಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.