ಆನೇಕಲ್ : ಪಟ್ಟಣಕ್ಕೆ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸ್ ಸಹಯೋಗದಲ್ಲಿ ‘ಮಾದಕ ವಸ್ತುಗಳು ನಮಗೆ ಬೇಡ’ ಜಾಗೃತಿ ಅಭಿಯಾನ ಪ್ರಯುಕ್ತ ನಡೆದ ಮ್ಯಾರಾಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಐದು ಕಿ.ಮೀ ಮ್ಯಾರಾಥಾನ್ ಹಾಗೂ ಮೂರು ಕಿ.ಮೀ ವಾಕಥಾನ್‌ನಲ್ಲಿ ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ನಟ ಶ್ರೇಯಸ್ ಮಂಜು, ನಟಿಯರಾದ ಸಪ್ತಮಿಗೌಡ, ಬೃಂದಾ ಆಚಾರ್ಯ, ಐಶ್ವರ್ಯ ಮ್ಯಾರಾಥಾನ್‌ಗೆ ಹುರುಪು ತುಂಬಿದರು.
ವ್ಯಸನದಿಂದ ಜೀವನ ನಾಶ: ಮ್ಯಾರಥಾನ್ ಉದ್ಘಾಟಿಸಿದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಯುವಕರುವ ಮಾದಕ ವಸ್ತು ವ್ಯಸನದಿಂದ ಹಲವು ವೈಯಕ್ತಿಕ ಮತ್ತು ಕೌಟುಂಬಿಕ ಜೀವನ ಹಾಳು ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳು ಫೆಡಂಭೂತವಿದ್ದಂತೆ ಒಮ್ಮೆ ವ್ಯಸನಿಯಾದರೆ ಇಡೀ ಜೀವನ ಸರ್ವನಾಶವಾದಂತೆ ಎಂದು ಎಚ್ಚರಿಸಿದರು.
ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉನ್ನತ ಸಾಧನೆ ಸಾಧ್ಯ. ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿವಿಧ ಕಾರ್ಯಕ್ರಮ ನಡೆಸುತ್ತಿದೆ. ಈ ಜಾಗೃತಿಯು ವಾಕಾಥಾನ್, ಮ್ಯಾರಾಥಾನ್‌ಗಳಿಗೆ ಸೀಮಿತವಾಗದೇ ಒಂದು ಸಾರ್ಥಕ ಜೀವನಕ್ಕೆ ಅಡಿಪಾಯ ಹಾಕಿದರೆ ಪೊಲೀಸ್ ಇಲಾಖೆಯ ಅಭಿಯಾನ ಸಾರ್ಥಕವಾಗುತ್ತದೆ. ಯುವಶಕ್ತಿಯು ದುಶ್ಚಟಗಳಿಗೆ ದಾಸರಾಗುವ ಬದಲಿಗೆ ಕ್ರೀಡೆ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶಕ್ಕೆ ಆಸ್ತಿಯಾಗಬಹುದಾಗಿದೆ ಎಂದರು.
ಮಾದಕ ವಸ್ತುಗಳ ನಮಗೆ ಬೇಡ ಜಾಗೃತಿ ಅಭಿಯಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಪ್ರತಿ ವರ್ಷ ಭಾರತದಲ್ಲಿ 1.6ಲಕ್ಷ ಮಂದಿ ಅಪಘಾತಗಳಿಂದ ಮೃತಪಡುತ್ತಾರೆ. ರಕ್ತದ ಅವಶ್ಯಕತೆ ಅತ್ಯಂತ ಮುಖ್ಯವಾದುದ್ದು. ಹಾಗಾಗಿ ಯುವಕರು ರಕ್ತದಾನದಲ್ಲಿ ತೊಡಗುವ ಮೂಲಕ ಮತ್ತೊಂದು ಜೀವಕ್ಕೆ ಸಹಾಯ ಮಾಡಿದಂತಾಗುತ್ತದೆ ಎಂದರು.
ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಛೆಬ್ಬಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್.ಪಿ. ಮಲ್ಲಿಕಾರ್ಜು ಬಾಲದಂಡಿ, ಎಎಸ್ಪಿಗಳಾದ ಪುರುಷೋತ್ತಮ್, ನಾಗರಾಜು, ಡಿವೈಎಸ್ಪಿ ಮೋಹನ್, ಬೊಮ್ಮಸಂದ್ರ ಕೈಗಾರಿಕ ಸಂಘದ ಅಧ್ಯಕ್ಷ ಎ.ಪ್ರಸಾದ್, ಸಂಜೀವ್ ಸಾವಂತ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಚಂದ್ರಪ್ಪ, ಐ.ಎನ್.ರೆಡ್ಡಿ, ನವೀನ್, ಮಂಜುನಾಥ್, ಸಂಜೀವ್ ಮಹಾಜನ್, ರಾಘವೇಂದ್ರ, ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಇದ್ದರು.
ವಿಜೇತರಿಗೆ ಬಹುಮಾನ
5ಕಿ.ಮೀ ಮ್ಯಾರಾಥಾನ್‌ನಲ್ಲಿ ಪುರುಷರ ವಿಭಾಗದಲ್ಲಿ ಸಂತೋಷ್ ಪ್ರಥಮ ಪ್ರಸನ್ನ ದ್ವಿತೀಯ ವೆಂಕಟೇಶ್ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ರಾಖಿ ಕುಮಾರಿ ಪ್ರಥಮ ಸ್ಥಾನ ಸಿಂಚನ ದ್ವಿತೀಯ ಸ್ಥಾನ ಮೋನಿಕಾ ತೃತೀಯ ಸ್ಥಾನ. 3 ಕಿ.ಮೀ. ವಾಕಾಥಾನ್‌ನಲ್ಲಿ ಪುರುಷರ ವಿಭಾಗದಿಂದ ಭಾರ್ಗವ್ ಪ್ರಥಮ ಮೊಹಮದ್ ಫರ್ಹಾನ್ ದ್ವಿತೀಯ ರಾಜು ತೃತೀಯ ಮತ್ತು ಮಹಿಳಾ ವಿಭಾಗದಿಂದ ಸೋಯ ಬಾಬು ಪ್ರಥಮ ಸಿ.ಎಸ್. ವರ್ಷಿತಾ ದ್ವಿತೀಯ ಮಾನಸ ಪವನ ಸೇವಂತಿ ತೃತೀಯ ಸ್ಥಾನ ಪಡೆದರು. ಪ್ರತಿ ವಿಭಾಗದಲ್ಲಿಯೂ ಪ್ರಥಮ ಸ್ಥಾನಕ್ಕೆ ₹15 ಸಾವಿರ ದ್ವಿತೀಯ ಸ್ಥಾನಕ್ಕೆ ₹10 ಸಾವಿರ ಮತ್ತು ತೃತೀಯ ಸ್ಥಾನಕ್ಕೆ ₹5 ಸಾವಿರ ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು. *** ವಿಂಟೇಜ್ ಕಾರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕಾರುಗಳ ಬಳಿ ಯುವಕರು ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಐಜಿಪಿ ರವಿಕಾಂತೇಗೌಡ ಅವರು ವಿಂಟೇಜ್ ಕಾರಿನಲ್ಲಿ ಓಡಾಡಿ ಖುಷಿ ಪಟ್ಟರು. ನಟಿ ಸಪ್ತಮಿಗೌಡ ಅವರೊಂದಿಗೆ ಸೆಲ್ಫಿಗಾಗಿ ಯುವಕರು ಮುಗಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.