
ಆನೇಕಲ್: ಕುಡಿದ ಅಮಲಿನಲ್ಲಿದ್ದ ನಾಲ್ವರು ಶನಿವಾರ ತಡರಾತ್ರಿ ರಸ್ತೆ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ವಿದ್ಯುತ್ ಕಂಬ ಹಾಗೂ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಅಡ್ಡಾದಿಡ್ಡಿ ಚಲಿಸುತ್ತಿದ್ದ ಬಸ್ ತಡೆದ ಸಾರ್ವಜನಿಕರು ಮದ್ಯದ ಮತ್ತಿನಲ್ಲಿ ತೂರಾಡುತ್ತಿದ್ದ ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆನೇಕಲ್‌ನ ಥಳಿ ರಸ್ತೆಯಲ್ಲಿ ಬಸ್ ಏರಿದ ಮದ್ಯದ ಮತ್ತಿನಲ್ಲಿದ್ದ ನಾಲ್ವರು ಯುವಕರು ಬಸ್ ಓಡಿಸಿಕೊಂಡು ಹೋಗಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿಯ ಎರಡು ವಿದ್ಯುತ್ ಕಂಬಗಳಿಗೆ ಗುದ್ದಿದೆ. ಅದಕ್ಕೂ ಮುನ್ನ ಥಳಿ ರಸ್ತೆಯಲ್ಲಿ ನಡೆದು ಹೊರಟಿದ್ದ ಪಾದಚಾರಿಗೆ ಗುದ್ದಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಡ್ಡಾದಿಡ್ಡಿ ಚಲಿಸುತ್ತಿದ್ದ ಬಸ್ ಕಂಡ ಸಾರ್ವಜನಿಕರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಸ್‌ನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಚಾಲನೆ ಮಡುತ್ತಿದ್ದ ಗುನ್ನಿ ಪಾಷಾ (26) ಎಂಬಾತನನ್ನು ಹಿಡಿದ ಸಾರ್ವಜನಿಕರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಡರಾತ್ರಿಯಾದ ಕಾರಣ ರಸ್ತೆಯಲ್ಲಿ ವಾಹನ ಹಾಗೂ ಜನಸಂಚಾರ ಕಡಿಮೆ ಇತ್ತು. ಹೀಗಾಗಿ ಭಾರಿ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಖಾಸಗಿ ಬಸ್ ಮಾಲೀಕರಾಗಲಿ ಇಲ್ಲವೇ ವಿದ್ಯುತ್ ಕಂಬ ಉರುಳಿ ಬಿದ್ದ ಕಾರಣ ಬೆಸ್ಕಾಂ ಅಧಿಕಾರಿಗಳು ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.