ADVERTISEMENT

ಬನ್ನೇರುಘಟ್ಟದಿಂದ ಜಪಾನ್‌ಗೆ ಗಜ ಪಯಣ

ಭಾರವಾದ ಹೆಜ್ಜೆ ಹಾಕಿದ ಆನೆಗಳು l ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿ ರವಾನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 23:57 IST
Last Updated 24 ಜುಲೈ 2025, 23:57 IST

ಬನ್ನೇರುಘಟ್ಟ ಉದ್ಯಾನದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಜಪಾನ್‌ಗೆ ತೆರಳುವ ಮುನ್ನ ನಾಲ್ಕು ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು

ಬನ್ನೇರುಘಟ್ಟ ಉದ್ಯಾನದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಜಪಾನ್‌ಗೆ ತೆರಳುವ ಮುನ್ನ ನಾಲ್ಕು ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು

ಆನೇಕಲ್: ತುಳಸಿ, ಶ್ರುತಿ ಮತ್ತು ಗೌರಿಗೆ ತಾಯ್ನಾಡು ಬಿಟ್ಟು ಜಪಾನ್‌ಗೆ ಹೋಗುವ ಸಂಭ್ರಮವಾದರೆ, ಅವರೊಂದಿಗೆ ಹೊರಟು ನಿಂತ ಸುರೇಶನಿಗೆ ತಾನು ಹುಟ್ಟಿ ಬೆಳೆದ ನೆಲ ಮತ್ತು ಸ್ನೇಹಿತರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಲಾರಿ ಹತ್ತಲು ಒಲ್ಲೆ ಎಂದು ಕಣ್ಣೀರು ಹಾಕುತ್ತಾ ಹಟ ಹಿಡಿದು ನಿಂತುಬಿಟ್ಟ!

ADVERTISEMENT

ಪ್ರತಿನಿತ್ಯ ಜಗಳವಾಡುತ್ತಿದ್ದ ಬಸವನಿಗೆ (ಆನೆ) ವಿದಾಯ ಹೇಳುವ ಮುನ್ನ ಅರ್ಧತಾಸು ಮುದ್ದಾಡಿದ. ಸೊಂಡಿಲು ಬೀಸಿ ಬರಸೆಳೆದು ಅಪ್ಪಿದ. ಕೊನೆಗೆ ಒಲ್ಲದ ಮನಸ್ಸಿನಿಂದ ಭಾರವಾದ ಹೃದಯದೊಂದಿಗೆ ಲಾರಿ ಹತ್ತಿದ. ಆಗ ಬಸವನ ಕಣ್ಣು ತೇವಗೊಂಡಿದ್ದವು. ಗೆಳೆಯನಿಗೆ ಕಣ್ಣೀರಿನೊಂದಿಗೆ ಬೀಳ್ಕೊಡುಗೆ ನೀಡಿದ.

ಈ ಭಾವನಾತ್ಮಕ ದೃಶ್ಯ ಕಂಡು ಬಂದಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ. ಈ ಕ್ಷಣಗಳಿಗೆ ಉದ್ಯಾನದ ಸಿಬ್ಬಂದಿ ಸಾಕ್ಷಿಯಾದರು. ಮೂಕ ಪ್ರಾಣಿಗಳ ವೇದನೆಗೆ ಅವರೂ ಕಣ್ಣೀರಾದರು.

ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ಜಪಾನ್‌ನ ಹಿಮೇಜಿ ಸೆಂಟ್ರಲ್‌ ಪಾರ್ಕ್‌ಗೆ ಹೊರಟು ನಿಂತ ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳಿಗೆ ಗುರುವಾರ ಆತ್ಮೀಯವಾಗಿ ಬೀಳ್ಕೋಡಲಾಯಿತು.

ಎಂಟು ವರ್ಷದ ಸುರೇಶ್, ಒಂಬತ್ತು ವರ್ಷದ ಗೌರಿ, ಏಳು ವರ್ಷದ ಶ್ರುತಿ ಹಾಗೂ ಐದು ವರ್ಷದ ತುಳಸಿಗೆ ಹೂವುಗಳಿಂದ ಅಲಂಕರಿಸಿದ್ದ ಉದ್ಯಾನದ ಸಿಬ್ಬಂದಿ ಅವುಗಳಿಗೆ ಇಷ್ಟದ ತಿಂಡಿ ತಿನಿಸಿ, ಮುದ್ದು ಮಾಡಿದರು.

ಕಾವಲು ಕಟ್ಟೆಯ ಸಮೀಪ ಕ್ರೇನ್‌ ಮೂಲಕ ಆನೆಗಳನ್ನು ಲಾರಿಗೆ ಹತ್ತಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಿಗ್ಗೆ 9.30ಕ್ಕೆ ಆನೆಗಳಿಗೆ ಪೂಜೆ ಸಲ್ಲಿಸಿ ಲೋಹದ ಪೆಟ್ಟಿಗೆ ಒಳಗೆ ಹಾಕಿ ಕ್ರೇನ್‌ ಸಹಾಯದಿಂದ ಲಾರಿಯಲ್ಲಿ ಇರಿಸಲಾಯಿತು.

ಉದ್ಯಾನ ಬಿಟ್ಟು ಹೋಗಲು ಮನಸ್ಸಿಲ್ಲದೆ ಅಲುಗಾಡದೆ ನಿಂತ ಸುರೇಶ್‌ನನ್ನು ಲಾರಿಗೆ ಹತ್ತಿಸಲು ಸಿಬ್ಬಂದಿ ಪರದಾಡಿದರು. ಎಲ್ಲ ಆನೆಗಳ ರಾಜನಂತಿದ್ದ ಸುರೇಶ್‌ನನ್ನು ಚಿಕ್ಕದಾದ ಪೆಟ್ಟಿಗೆ (ಕ್ರಾಲ್‌) ಒಳಗೆ ಕಳಿಸಲು ಸಿಬ್ಬಂದಿ ಒಂದೂವರೆ ತಾಸು ಶ್ರಮಪಟ್ಟರು.

ಬೆಳಗ್ಗೆಯಿಂದ ಸಂಭ್ರಮದಲ್ಲಿದ್ದ ಶ್ರುತಿ ಎಂಬ ಆನೆ ಪೆಟ್ಟಿಗೆ ಒಳಗೆ ಹೋಗುವ ವೇಳೆ ಗದ್ಗದಿತಳಾದಳು. ಮಾವುತರು ಮತ್ತು ಅಧಿಕಾರಿಗಳು ಬಾಳೆ ಹಣ್ಣಿನ ಆಸೆ ತೋರಿಸಿ ಪೆಟ್ಟಿಗೆ ಒಳಗೆ ಹತ್ತಿಸಲು ಯಶಸ್ವಿಯಾದರು.

ಪ್ರತಿ ಆನೆಯನ್ನು ಕ್ರಾಲ್‌ಗೆ ಹತ್ತಿಸಲು ಸಿಬ್ಬಂದಿ ಒಂದು ತಾಸಿಗೂ ಹೆಚ್ಚು ಸಮಯ ತೆಗೆದುಕೊಂಡರು. ಆನೆಗಳು ಗಾಬರಿಯಾಗದಂತೆ ಅತ್ಯಂತ ಸೂಕ್ಷ್ಮವಾಗಿ ಮಧ್ಯಾಹ್ನ 2.30ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸಲಾಯಿತು.

ಆನೆಗಳಿಗೆ ವಿಮಾನ ನಿಲ್ದಾಣದಲ್ಲಿ ತಿನ್ನಲು ಬಾಳೆಹಣ್ಣು, ಕ್ಯಾರೇಟ್‌, ಸೌತೆಕಾಯಿಯ ವ್ಯವಸ್ಥೆ ಮಾಡಲಾಗಿತ್ತು. ಸರಕು ಸಾಗಣೆ (ಕಾರ್ಗೊ) ವಿಮಾನದಲ್ಲಿ ಜಪಾನ್‌ನತ್ತ ಪ್ರಯಾಣ ಬೆಳೆಸಿದವು. ಪ್ರಾಣಿ ವಿನಿಮಯ ಯೋಜನೆ ಅಡಿ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಆನೆಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು.

ವಿಮಾನದಲ್ಲಿ ಸತತ ಎಂಟು ತಾಸು ನಿಂತು ಪ್ರಯಾಣ ಮಾಡಲು ಈ ಆನೆಗಳಿಗೆ ಮೂರು ತಿಂಗಳಿಂದ ವಿಶೇಷ ತರಬೇತಿ ನೀಡಲಾಗಿದೆ. ಅವುಗಳೊಂದಿಗೆ ಮಾವುತರು, ಕಾವಾಡಿಗಳು, ವೈದ್ಯರು ಮತ್ತು ತಜ್ಞರ ತಂಡ ಕೂಡ ತೆರಳಿತು.

ಉದ್ಯಾನದ ಆನೆ ಸುವರ್ಣ ಮಗ ಸುರೇಶ್‌, ವೇದಾ ಮಗಳು ತುಳಸಿ, ವನಶ್ರೀ ಮಗಳು ಶ್ರುತಿ ಮತ್ತು ರೂಪಾ ಪುತ್ರಿ ಗೌರಿ. ಇವೆಲ್ಲ ಬನ್ನೇರುಘಟ್ಟ ದಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು.

ಮೊದಲ ಬಾರಿಗೆ ಪ್ರಾಣಿ ವಿನಿಮಯ

ಬನ್ನೇರುಘಟ್ಟ ಉದ್ಯಾನದಿಂದ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮ ರೂಪಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ, ಚೀಫ್‌ ವೈಲ್ಡ್‌ ಲೈಫ್‌ ವಾರ್ಡನ್‌, ಪಶುವೈದ್ಯಕೀಯ ಇಲಾಖೆ, ಕೇಂದ್ರ ಪರಿಸರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ಪ್ರಾಣಿ ವಿನಿಮಯ ಕಾರ್ಯಕ್ರಮ ರೂಪಿಸಲಾಗಿದೆ.

ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯ (ಡೈರೆಕ್ಟರ್‌ ಜನರಲ್‌ ಆಫ್‌ ಫಾರಿನ್‌ ಟ್ರೇಡ್‌ ಮತ್ತು ಸೈಟಸ್‌) ಒಪ್ಪಂದದಂತೆ ಪ್ರಾಣಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಜಪಾನ್‌ ಮತ್ತು ಭಾರತ ರಾಯಭಾರಿ ಕಚೇರಿಗಳು ಪ್ರಾಣಿಗಳ ವಿನಿಮಯಕ್ಕೆ ಹೆಚ್ಚು ಸಹಕಾರ ನೀಡಿವೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ದೇಶಕ್ಕೆ ಮೊದಲ ಬಾರಿಗೆ ಪೂಮಾ

ಪ್ರಾಣಿ ವಿನಿಮಯ ಯೋಜನೆ ಅಡಿ ನಾಲ್ಕು ಆನೆಗಳನ್ನು ಜಪಾನ್‌ಗೆ ನೀಡಿ ಪ್ರತಿಯಾಗಿ ನಾಲ್ಕು ಚೀತಾ, ಎರಡು ಜಾಗ್ವಾರ್‌, ನಾಲ್ಕು ಪೂಮಾ, ಮೂರು ಚಿಂಪಾಂಜಿ ಮತ್ತು ಎಂಟು ಕ್ಯಾಪುಚಿನ್‌ ಕೋತಿಗಳನ್ನು ತರಿಸಿಕೊಳ್ಳಲಾಗುತ್ತಿದೆ.

ಪೂಮಾ (ಬೆಕ್ಕು ಜಾತಿಯ ಪರ್ವತ ಸಿಂಹ) ದೇಶದಲ್ಲಿಯೇ ಮೊದಲ ಬಾರಿಗೆ ಬನ್ನೇರು ಘಟ್ಟಕ್ಕೆ ಬರುತ್ತಿದೆ. ಕ್ಯಾಪುಚಿನ್‌ ಕೋತಿಗಳು ಮತ್ತು ಚೀತಾಗಳು ಆಗಸ್ಟ್‌ ಸೆಪ್ಟಂಬರ್‌ ತಿಂಗಳಿನಲ್ಲಿ ಬನ್ನೇರುಘಟ್ಟಕ್ಕೆ ಬರಲಿವೆ.

ಉಳಿದ ಪ್ರಾಣಿಗಳು ವರ್ಷಾಂತ್ಯಕ್ಕೆ ಬರಲಿವೆ. ಈ ವಿನಿಮಯವು ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಿಸಲು ಉಪಯಕ್ತವಾಗಲಿದೆ.

ಚೆನ್ನೈ, ಒಡಿಶಾ, ಮೈಸೂರು ಉದ್ಯಾನಗಳಿಗೆ ಹೋಲಿಸಿದರೆ ಬನ್ನೇರುಘಟ್ಟದಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಿದೆ. ಪ್ರವಾಸಿಗರನ್ನು ಸೆಳೆಯಲು ಮತ್ತು ಪ್ರಾಣಿಗಳ ಸಂಖ್ಯೆ ಹೆಚ್ಚಿಸಲು ಪ್ರಾಣಿ ವಿನಿಮಯ ಉಪಯುಕ್ತ ಎಂದು ಸೂರ್ಯಸೇನ್‌ ತಿಳಿಸಿದರು.

ಜಪಾನ್‌, ಭಾರತ ಆನೆಗಳ ಸಂಬಂಧ

ಜಪಾನ್‌ ಮತ್ತು ಭಾರತದ ಆನೆಗಳಿಗೆ ವಿಶೇಷ ಸಂಬಂಧವಿದೆ. ಜಪಾನ್‌ ಜನರಿಗೂ ಏಷ್ಯಾ ಆನೆಗಳೆಂದರೆ ಅತ್ಯಂತ ಪ್ರಿಯವಾದ ಪ್ರಾಣಿ. 1955ರ ಎರಡನೇ ಮಹಾಯುದ್ಧದಲ್ಲಿ ಜಪಾನ್‌ನಲ್ಲಿ ಏಕೈಕ ಆನೆ ಆಹಾರವಿಲ್ಲದೇ ಮೃತಪಟ್ಟಿತ್ತು. ನಂತರದ ದಿನಗಳಲ್ಲಿ ಜವಾಹರ ಲಾಲ್‌ ನೆಹರೂ ಅವರು ಜಪಾನ್‌ಗೆ ಆನೆಗಳನ್ನು ಕೊಡುಗೆಯಾಗಿ ನೀಡಿದ್ದರು.

2021ರಲ್ಲಿ ಮೈಸೂರು ಮೃಗಾಲಯದಿಂದ ಮೂರು ಆನೆಗಳನ್ನು ಜಪಾನ್‌ಗೆ ಕಳುಹಿಸಲಾಗಿತ್ತು. ಇದೀಗ ಬನ್ನೇರುಘಟ್ಟ ಉದ್ಯಾನವನ ದಿಂದ ನಾಲ್ಕು ಆನೆಗಳನ್ನು ಜಪಾನ್‌ಗೆ ಕಳುಹಿಸಲಾಗುತ್ತಿದೆ.

ಇಂಗ್ಲಿಷ್‌ಗೆ ಸ್ಪಂದಿಸುವ ತರಬೇತಿ

ಜಪಾನ್‌ ಸಿಬ್ಬಂದಿ ಸಹ ಬನ್ನೇರುಘಟ್ಟಕ್ಕೆ ಆಗಮಿಸಿ ಆನೆಗಳಿಗೆ ಇಂಗ್ಲಿಷ್‌ಗೆ ಸ್ಪಂದಿಸುವ ತರಬೇತಿ ನೀಡಿದ್ದಾರೆ. ಆನೆಗಳೊಂದಿಗೆ ಆನೆ ಮೇಲ್ವಿಚಾರಕ ಸುರೇಶ್‌, ಮಾವುತರಾದ ಕಾಳಪ್ಪ, ದೇವಪ್ಪ, ಕಾರ್ತಿಕ್‌, ಅಯ್ಯಪ್ಪ, ಜೀವಶಾಸ್ತ್ರಜ್ಞೆ ಐಶ್ವರ್ಯ ಮತ್ತು ಪಶುವೈದ್ಯರಾದ ಕಿರಣ್‌, ಆನಂದ್‌ ಅವರು ಜಪಾನ್‌ಗೆ ತೆರಳಿದ್ದಾರೆ.

ಸಂವಹನ, ಸ್ಪಂದಿಸುವ ಗುಣ ಸೇರಿದಂತೆ ಜಪಾನ್‌ನ ವಾತಾವರಣಕ್ಕೆ ಹೊಂದಿಕೊಳ್ಳಲು ಆನೆಗಳಿಗೆ ಸಿಬ್ಬಂದಿ ಸಹಾಯವಾ ಗಲಿದ್ದಾರೆ. ಆನೆಗಳ ಆಹಾರ ಪದ್ಧತಿ ಬದಲಾಗದಂತೆ ವ್ಯವಸ್ಥೆ ಮಾಡಲು ಜಪಾನ್‌ ಉದ್ಯಾನದಲ್ಲಿ ಅಕ್ಕಿ ಮತ್ತು ರಾಗಿಯ ವ್ಯವಸ್ಥೆ ಮಾಡಲಾಗಿದೆ.

ಆನೆಗಳು ನಮ್ಮ ಬದುಕಿನ ಭಾಗ. ಪ್ರತಿದಿನ ಆನೆಗಳನ್ನು ನೋಡಿಕೊಳ್ಳುವುದೇ ನಮ್ಮ ಕೆಲಸ. ಏಳೆಂಟು ವರ್ಷಗಳಿಂದ ನೋಡಿಕೊಂಡ ಆನೆಗಳು ಜಪಾನ್‌ಗೆ ತೆರಳುತ್ತಿರುವುದು ನೋವಿನ ವಿಷಯ.
ಕಾರ್ತೀಕ್‌, ಶ್ರುತಿಯ ಮಾವುತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.