
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿಯಿಂದ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ 2,760 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಮಂಗಳವಾರ ರೈತರು ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭೂಸ್ವಾಧೀನಕ್ಕೆ ಒಳಪಡುತ್ತಿರುವ ಕಸಾಘಟ್ಟ, ಐನಹಳ್ಳಿ, ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ ಗ್ರಾಮಗಳ ರೈತರು ಸೇರಿದಂತೆ ಹತ್ತಾರು ಹಳ್ಳಿಗಳಿಂದ ರೈತರು ಟ್ರ್ಯಾಕ್ಟರ್‌ಗಳಲ್ಲಿ ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ತಾಲ್ಲೂಕಿನ ರೈತರ ಹಿತಕ್ಕಾಗಿ ಯಾವುದೇ ಹೋರಾಟಕ್ಕಾದರೂ ನಿಲ್ಲುತ್ತೇನೆ. ದೊಡ್ಡಬೆಳವಂಗಲ ಭಾಗದ ರೈತರು ಭೂಸ್ವಾಧೀನದ ನೋಟಿಸ್ ಬರುವ ಮುನ್ನ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಲು ಮುಂದಾಗಿರುವುದು ಸಮರ್ಪಕವಾಗಿದೆ. ಈಗಾಗಲೇ ಭೂಸ್ವಾಧೀನ ಮಾಡದಂತೆ ವಸತಿ ಸಚಿವರಿಗೆ ಮನವಿ ಮಾಡಲಾಗಿದೆ. ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ ಭೂಸ್ವಾಧೀನದ ವಿರುದ್ಧ ಪ್ರಾರಂಭವಾಗಿರುವ ಹೋರಾಟ ನಿಲ್ಲಬಾರದು ಎಂದರು.
ತಾಲ್ಲೂಕಿನಲ್ಲಿ ರಿಂಗ್ ರೈಲು ಯೋಜನೆಯನ್ನು ಆರಂಭಿಸಲು ಭೂಮಿ ಗುರುತಿಸಲಾಗಿದೆ. ಇದರ ವಿರುದ್ಧವು ಪ್ರತಿಭಟನೆಗೂ ರೈತರ ಪರವಾಗಿ ನಿಲ್ಲುತ್ತೇನೆ. ಈಗಾಗಲೇ ಸಬರ್‌ಬನ್ ರೈಲು ರಾಜನುಕುಂಟೆವರೆಗೂ ಬಂದಿದೆ. ಇದನ್ನೇ ದೊಡ್ಡಬಳ್ಳಾಪುರ ನಗರದವರೆಗೂ ವಿಸ್ತರಿಸಬೇಕು. ರೈತರ ಒಪ್ಪಿಗೆ ಇಲ್ಲದೆ ಭೂಮಿ ವಶಪಡಿಸಿಕೊಳ್ಳುವ ಕೆಟ್ಟ ನೀತಿ ರದ್ದಾಗಬೇಕು ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಹತ್ತಾರು ವಿವಿಧ ಕಾರಣಗಳಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಚನ್ನರಾಯಪಟ್ಟಣ ಹೋರಾಟದಂತೆ ತಾಲ್ಲೂಕಿನಲ್ಲೂ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಬೆಂಗಳೂರು ಸಮೀಪ ಭೂಮಿ ಫಲವತ್ತಾಗಿದ್ದು ನಗರಕ್ಕೆ ಹಣ್ಣು, ತರಕಾರಿಗಳನ್ನು ರೈತರು ಪೂರೈಕೆ ಮಾಡುತ್ತಿದ್ದಾರೆ. ಇಂತಹ ಭೂಮಿಯನ್ನು ವಶಪಡಿಸಿಕೊಳ್ಳಬೇಡಿ ಎಂದು ವಿಧಾನಸಭೆಯಲ್ಲೂ ಈ ಹಿಂದೆ ಮನವಿ ಮಾಡಿದ್ದೆ. ರೈತರ ಜತೆಗೆ ಹಗಲು ರಾತ್ರಿ ಎನ್ನದೇ ಹೋರಾಟಕ್ಕೆ ನಿಲ್ಲುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಮಹಿಳಾ ಮುಖಂಡರಾದ ಪ್ರಭಾಬೆಳವಂಗಲ, ಕೆ.ಸುಲೋಚನಮ್ಮ, ನಳಿನಾಕ್ಷಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಸಿ.ರಾಮಕೃಷ್ಣಯ್ಯ, ಅಧ್ಯಕ್ಷ ಉಗ್ರಯ್ಯ, ಕಾರ್ಯಾಧ್ಯಕ್ಷ ಸಿ.ಎಚ್.ರಾಮಕೃಷ್ಣಯ್ಯ, ಕೆ.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ರಾಮೇಗೌಡ, ಉಪಾಧ್ಯಕ್ಷ ವಾಸದೇವಮೂರ್ತಿ, ಗಂಗಚನ್ನಯ್ಯ, ಬಸವರಾಜು, ರಮೇಶ್, ಕಾರ್ಯದರ್ಶಿ ಅಂಜನಮೂರ್ತಿ, ಚಿಕ್ಕೆಗೌಡ, ಧರ್ಮೇಂದ್ರ, ಕಾರ್ಮಿಕ ಮುಖಂಡ ವೆಂಕಟೇಶ್, ನರಸಿಂಹಮೂರ್ತಿ ಇದ್ದರು.ಆರ್.ಚಂದ್ರತೇಜಸ್ವಿ, ಪ್ರಾಂತ ರೈತ ಸಂಘದ ಮುಖಂಡ
ಹೋರಾಟ ಮುಂದುವರೆಯಲಿದೆ
ಫಲವತ್ತಾದ ಭೂಮಿ ಬಂಡವಾಳಶಾಹಿಗಳ ಕೈಸೇರುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನಗರವಾಸಿಗಳಿಗೆ ಹಣ್ಣು, ಮಾಂಸ, ಹಾಲು ನೀಡುವ ರೈತರ ಭೂಮಿಗೆ ಕನ್ನಹಾಕಲು ಸರ್ಕಾರ ಮುಂದಾಗಿದೆ. ಟೌನ್‌ಶಿಪ್ ನೆಪದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತ ವಿರೋಧಿ ನೀತಿಯ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ.ಆರ್.ಪ್ರಸನ್ನ, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ
ಒಗ್ಗಟ್ಟಿನ ಹೋರಾಟ ಅಗತ್ಯ
ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ವಂಶಪಾರಂಪರಗತವಾಗಿ ಬಂದ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಚನ್ನರಾಯಪಟ್ಟಣ ರೈತರು ಒಗ್ಗಟ್ಟಾಗಿ ಪ್ರಾಣ ಹೋದರು ಭೂಮಿ ನೀಡಲ್ಲ ಎಂಬ ಹೋರಾಟ ಮಾಡಿದ್ದರು. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು.ಸಂಜೀವ್ ನಾಯಕ್, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ
ಭೂಸ್ವಾಧೀನ ಪ್ರಯತ್ನ ಖಂಡನೀಯ
ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಪ್ರಯತ್ನ ಖಂಡನೀಯ. ಗ್ರಾಮಾಂತರ ಜಿಲ್ಲೆಯ ಹೆಚ್ಚಿನ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ. ಅನ್ನ ಬೆಳೆಯುವ ರೈತರಿಗೆ ಭೂಮಿ ಇಲ್ಲದಂತಾಗುತ್ತಿದೆ. ಭೂಮಿ ಬೆಲೆ ಏರುತ್ತಿದ್ದಂತೆ ಮಾನವೀಯತೆಯ ಇಲ್ಲದೆ ರೈತರ ಭೂಮಿ ಕಬಳಿಸಲಾಗುತ್ತಿದೆ.ಆರ್.ಚಂದ್ರತೇಜಸ್ವಿ, ಪ್ರಾಂತ ರೈತ ಸಂಘದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.