ADVERTISEMENT

ಕಪ್ಪು ಮಚ್ಚೆ ರೋಗ: ಕೈ ಸೇರದ ಮಾವು ಫಸಲು

ಮಾವಿನ ಬೆಲೆ ಚೇತರಿಕೆ ಕಂಡರೂ ಬೆಳೆಗಾರರಲ್ಲಿ ಕಾಣದ ಖುಷಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 10:11 IST
Last Updated 4 ಜುಲೈ 2023, 10:11 IST
ಶ್ರೀನಿವಾಸಪುರದ ಮಾವು ಮಾರುಕಟ್ಟೆಯ ಮಂಡಿಯೊಂದರಲ್ಲಿ ರಾಶಿ ಹಾಕಲಾಗಿರುವ ತೋತಾಪುರಿ ಜಾತಿ ಮಾವು.
ಶ್ರೀನಿವಾಸಪುರದ ಮಾವು ಮಾರುಕಟ್ಟೆಯ ಮಂಡಿಯೊಂದರಲ್ಲಿ ರಾಶಿ ಹಾಕಲಾಗಿರುವ ತೋತಾಪುರಿ ಜಾತಿ ಮಾವು.   

ಶ್ರೀನಿವಾಸಪುರ: ಸುಗ್ಗಿ ಮುಗಿಯು ಹಂತದಲ್ಲಿ ಮಾವಿನ ಕಾಯಿ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದೆ. ಇದರಿಂದ ಒಳ್ಳೆಯ ಬೆಲೆ ನಿರೀಕ್ಷೆಯಲ್ಲಿ ಕಾಯಿ ಕಟಾವು ಮುಂದೂಡಿದ್ದ ರೈತರು ಖುಷಿಯಲ್ಲಿದ್ದಾರೆ. ಆದರೆ ಕಾಯಿ ಕಟಾವು ತಡವಾದ ಪರಿಣಾಮವಾಗಿ ಬಹಳಷ್ಟು ಕಾಯಿ ಕೊಳೆತು ನೆಲಕಚ್ಚಿದೆ.

ಈಗ ಇರುವ ಕಾಯಿಗೆ ಬೆಲೆ ಬಂದಿದೆಯಾದರೂ, ತಡವಾಗಿ ಕಿತ್ತ ಪರಿಣಾಮವಾಗಿ ಶೇ.70 ರಷ್ಟು ಕಾಯಿ ಕಪ್ಪು ಮಚ್ಚೆ ರೋಗದಿಂದ ಕೊಳೆತು ನೆಲಕಚ್ಚಿದೆ. ಈಗ ಬೆಲೆ ಬಂದಿದ್ದರೂ ಕೈಗೆ ಬರುವುದು ಅಷ್ಟಕ್ಕಷ್ಟೆ ಎಂಬುದು ಮಾವು ಬೆಳೆಗಾರ ರಾಮಕೃಷ್ಣ ಅವರ ಅಳಲು.

ಮಾವಿನ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದಂತೆ, ವ್ಯಾಪಾರಿಗಳು ರೈತರಿಂದ ನೇರವಾಗಿ ಕಾಯಿ ಖರೀದಿಸಲು ಮುಂದಾಗಿದ್ದಾರೆ. ರೈತರು, ಕಮೀಷನ್ ಹಾಗೂ ಸಾಗಾಣಿಕೆ ವೆಚ್ಚ ಉಳಿಯುವುದರಿಂದ ತೋಟದಲ್ಲಿಯೇ ಫಸಲು ಮಾರಾಟ ಮಾಡಲು ಮುಂದಾಗಿದ್ದಾರೆ.

ADVERTISEMENT

ಈ ಬಾರಿ ಸುಗ್ಗಿ ಆರಂಭದಿಂದಲೂ ಮಾವಿನ ಕಾಯಿಗೆ ಒಳ್ಳೆ ಬೆಲೆ ಸಿಗಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಬೆಲೆಯಲ್ಲಿ ಮಾರಾಟವಾಯಿತು.

ತಾಲ್ಲೂಕಿನಲ್ಲಿ ಜ್ಯೂಸ್ ತಯಾರಿಕೆಗಾಗಿಯೇ ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುವ ತೋತಾಪುರಿ ಮಾವು ಬೆಲೆಯಲ್ಲಿ ಹಿಂದೆಬಿದ್ದಿತ್ತು. ಸುಗ್ಗಿಯ ಆರಂಭದಲ್ಲಿ ಒಂದು ಟನ್‌ ₹10 ಸಾವಿರದ ಆಜೂಬಾಜು ಮಾರಾಟವಾಯಿತು. ಮಾರುಕಟ್ಟೆಗೆ ಆವಕದ ಪ್ರಮಾಣ ಹೆಚ್ಚಿದಂತೆ 1 ಟನ್ ಕಾಯಿ ಬೆಲೆ ₹7000ಕ್ಕೆ ಕುಸಿಯಿತು. ಕುಸಿದ ಬೆಲೆ ಚೇತರಿಸಿಕೊಳ್ಳಲಿಲ್ಲ.

ಈಗ ಸುಗ್ಗಿ ಕೊನೆ ಹಂತ ತಲುಪಿದೆ. ಎರಡು ದಿನಗಳಿಂದ ಮಾವಿನ ಕಾಯಿ ಬೆಲೆಯಲ್ಲಿ ಗಣನೀಯ ಜಿಗಿತ ಉಂಟಾಗಿದೆ. ತೋತಾಪುರಿ  ಒಂದು ಟನ್‌ಗೆ ₹16 ರಿಂದ 18 ಸಾವಿರದಂತೆ ಮಾರಾಟವಾಗುತ್ತಿದೆ. ₹20 ಸಾವಿರದ ಗಡಿ ದಾಟುವ ನಿರೀಕ್ಷೆ ಇದೆ.

ಸುಗ್ಗಿಯ ಕೊನೆಯಲ್ಲಿ ಬರುವ ನೀಲಂ ಜಾತಿ ಮಾವು ಟನ್‌ ಒಂದಕ್ಕೆ ₹5000 ದಂತೆ ಮಾರಾಟವಾಗುತ್ತಿತ್ತು. ಆದರೆ ಈಗ ದಿಢೀರ್ ₹12 ಸಾವಿರಕ್ಕೆ ಜಿಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.