ದೀಪಾವಳಿ
ದೊಡ್ಡಬಳ್ಳಾಪುರ: ಗಣೇಶಮೂರ್ತಿ ವಿಸರ್ಜನೆಗೂ ಮುನ್ನ ನಡೆದ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿದು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಮುತ್ತೂರಿನಲ್ಲಿ ಮೂವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ದೀಪಾವಳಿ ಹಬ್ಬದ ಸಮೀಪಿಸಿದೆ.
ಪ್ರತಿವರ್ಷವು ಗಣೇಶ ಮತ್ತು ದೀಪಾವಳಿ ಹಬ್ಬಗಳಿಗೂ ಮುನ್ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರತಿ ವರ್ಷದಂತೆ ಪಿಒಪಿ ಗಣೇಶನಮೂರ್ತಿಗಳನ್ನು ಬಳಸಬಾರದು, ಹಸಿರು ಪಟಾಕಿ ಮಾತ್ರ ಬಳಸಬೇಕು, ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ ಮುಂತಾದ ನಿಯಮಗಳು ಕಡ್ಡಾಯ ಎಂದು ಪ್ರಚಾರ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಅನುಷ್ಠಾನ ಆಗುವುದೇ ಇಲ್ಲ.
ಪಟಾಕಿ ಸಿಡಿದು ಇಬ್ಬರು ಬಾಲಕರು ಮೃತಪಟ್ಟ ಘಟನೆ ನಂತರ ಜಿಲ್ಲೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ಮತ್ತು ಮೆರವಣಿಗೆ ವೇಳೆ ಪಟಾಕಿ ಬಳಸದಂತೆ ನಿಷೇಧಿಸಲಾಗಿತ್ತು. ಈ ನಿಷೇಧ ನಗರ ಪ್ರದೇಶದಲ್ಲಿ ಮಾತ್ರ ಜಾರಿಯಾಗಿತ್ತೇ, ವಿನಹ ಗ್ರಾಮೀಣ ಭಾಗದಲ್ಲಿ ಪಟಾಕಿಗಳ ಹಬ್ಬರ ಜೋರಾಗಿಯೇ ಇತ್ತು.
ದೀಪಾವಳಿ ಹಬ್ಬದಲ್ಲಿ ಇದು ಪುನರಾವರ್ತನೆ ಆಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಸುರಕ್ಷಿತ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡಲು ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಜಿಲ್ಲೆ ಯಾದ್ಯಂತ ಯಾವುದೇ ಭಾಗದಲ್ಲಿ ಪಟಾಕಿ ದುರಂತಗಳು ಸಂಭವಿಸ ದಂತೆ ಪಟಾಕಿ ಮಾರಾಟಗಾ ರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಿ, ವಾಯುಮಾಲಿನ್ಯ ತಡೆಯುವ ಜವಾಬ್ದಾರಿಯೂ ಇದೆ. ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟ ಪರಿಶೀಲಿಸಬೇಕು. ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿ ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಪಟಾಕಿ ಮಾರಾಟ ಮಳಿಗೆಗಳಲ್ಲಿ ಅನಧಿಕೃತವಾಗಿ ಪಟಾಕಿ ಸಂಗ್ರಹಿಸಿದರೆ ಕ್ರಮ. ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಸುರಕ್ಷತಾ ಕ್ರಮ ಪೊಲೀಸರು ಪರಿಶೀಲನೆ ನಡೆಸಬೇಕು. ಹಬ್ಬದ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧ.
ಅಧಿಕೃತ ಪಟಾಕಿ ಮಾರಾಟಗಾರರು ಮಳಿಗೆ ತೆರಯಲು ಪರವಾನಗಿ ಪಡೆಯುವುದು ಕಡ್ಡಾಯ. ಅಲ್ಲದೆ ಸ್ಥಳೀಯ ಆಡಳಿತ ನಿಗದಿ ಪಡಿಸಿದ ಸ್ಥಳದ ಹೊರತು ಬೇರೆಡೆಯಲ್ಲಿ ಪಟಾಕಿ ಅಂಗಡಿ ಮಳಿಗೆ ತೆರೆಯುವುದು ಸಹ ಕಾನೂನು ವಿರುದ್ಧ.
ಪರಿಸರಸ್ನೇಹಿ ಹಬ್ಬ ಆಚರಿಸೋಣ
ದೀಪಾವಳಿ ಬೆಳಕಿನ ಹಬ್ಬ. ಇದು ಅಂಧಕಾರದ ಮೇಲೆ ಬೆಳಕಿನ ಜಯದ ಸಂಕೇತ. ಪಟಾಕಿ ಸಿಡಿಸುವುದರಿಂದ ಕಾರ್ಬನ್ ಡೈಆಕ್ಸೈಡ್, ಸಲ್ಪರ್ ಮುಂತಾದ ವಿಷಕಾರಿ ಅನಿಲಗಳು ಹೊರಹೊಮ್ಮುತ್ತವೆ. ಅತಿಯಾದ ಸದ್ದು ಹಿರಿಯರು, ಮಕ್ಕಳು ಹಾಗೂ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಪಟಾಕಿಗಳಲ್ಲಿ ಬಳಸುವ ರಾಸಾಯನಿಕಗಳು ಭೂಮಿಗೆ, ನೀರಿಗೆ ಹಾನಿಯಾಗುತ್ತಿದೆ. ಅಪಾಯಕಾರಿ ಪಟಾಕಿ ನಿಷೇಧ ಅನಿವಾರ್ಯ. ಹಸಿರು ಪಟಾಕಿ ಬಳಕೆ, ಸಾಂಪ್ರದಾಯಿಕ ದೀಪ, ವಿದ್ಯುತ್ ದೀಪಗಳ ಅಲಂಕಾರ, ಹೂವು, ರಂಗೋಲಿ, ದೀಪಗಳಿಂದ ಮನೆ ಅಲಂಕರಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಆದ್ಯತೆ ನೀಡಬೇಕು. ಬೆಳಕಿನ ಹಬ್ಬವನ್ನು ಶಾಂತಿ, ಪ್ರೀತಿ ಮತ್ತು ಪರಿಸರದ ರಕ್ಷಣೆಯೊಂದಿಗೆ ಆಚರಿಸೋಣ.
ಎಚ್.ಭಾವನಾ, ವಿದ್ಯಾರ್ಥಿನಿ, ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದ ಮೂತ್ತೂರಿನಲ್ಲಿ ಗಣೇಶವಿಸರ್ಜನೆ ವೇಳೆ ಪಟಾಕಿ ಸಿಡಿತದಿಂದ ಹಾನಿಯಾಗಿದ್ದ ಮಿನಿ ಕ್ರೈನ್(ಸಂಗ್ರಹ ಚಿತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.